ಸಾಗರದ ಐತಿಹಾಸಿಕ ಶ್ರೀ ಮಹಾಗಣಪತಿ ದೇವರ ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ.  
ನ್ಯೂಸ್

ಶ್ರೀ ಮಹಾಗಣಪತಿ ವಿಜೃಂಭಣೆಯ ರಥೋತ್ಸವ

ಸಾಗರ: ಸಾಗರದ ಐತಿಹಾಸಿಕ ಶ್ರೀ ಮಹಾಗಣಪತಿ ರಥೋತ್ಸವ ಮಂಗಳವಾರ ಸಾಂಪ್ರದಾಯಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವ್ಯವಸ್ಥಿತವಾಗಿ ವಿಜೃಂಭಣೆಯಿಂದ ನೆರವೇರಿತು. ಮುಹೂರ್ತದ ಸಮಯಕ್ಕೆ ಬಿಸಿಲಿನ ಝಳ ಹೆಚ್ಚಾಗಿದ್ದರೂ ಲಕ್ಕಿಸದೆ ಸಾವಿರಾರು ಭಕ್ತರು ಜಮಾಯಿಸಿ ರಥೋತ್ಸವಕ್ಕೆ ಸಾಕ್ಷಿಯಾದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಕ್ತರಿಗೆ ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು.

ಶಾಸಕ ಗೋಪಾಲಕೃಷ್ಣ ಬೇಳೂರು ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ಕೋಟಿ ರೂ. ವೆಚ್ಚದಲ್ಲಿ ಗಣಪತಿ ದೇವಸ್ಥಾನ ಅಭಿವೃದ್ಧಿಗೆ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಜಾತ್ರೆ ನಂತರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಕಾಗೋಡು ತಿಮ್ಮಪ್ಪ ಸಚಿವರಾಗಿದ್ದ ಸಂದರ್ಭ ಗಣಪತಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಆದ್ಯತೆ ನೀಡಿದ್ದರು. ಮುಂದಿನ ದಿನಗಳಲ್ಲಿ ದೇವಾಲಯದ ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮಹಾಗಣಪತಿ ಜಾತ್ರಾ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆದಿದೆ. ಜಾತ್ರೋತ್ಸವ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ರಥೋತ್ಸವದಲ್ಲಿ ಹಿಂದಿನ ಎಲ್ಲ ವರ್ಷಗಳಿಗಿಂತ ದಾಖಲೆ ಎನ್ನುವಂತೆ ಭಕ್ತರು ಪಾಲ್ಗೊಂಡಿದ್ದಾರೆ ಎಂದರು

ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಜಾತ್ರೋತ್ಸವ ಸಮಿತಿ ಪ್ರಧಾನ ಸಂಚಾಲಕ ಟಿ.ವಿ.ಪಾಂಡುರಂಗ, ಲಿಂಗರಾಜ್, ಐ.ವಿ.ಹೆಗಡೆ, ವಿ.ಟಿ.ಸ್ವಾಮಿ, ತಹಸೀಲ್ದಾರ್ ಚಂದ್ರಶೇಖರ ನಾಯ್ಕ, ಕಾರ್ಯ ನಿರ್ವಹಣಾಧಿಕಾರಿ ಪ್ರಮೀಳಾಕುಮಾರಿ, ದೇವಾಲಯದ ಅರ್ಚಕ ಲಕ್ಷ್ಮಣ್ ಜೋಯಿಸ್, ಸಮಿತಿ ಸಂಚಾಲಕರು ಇದ್ದರು.