ತರೀಕೆರೆ: ಮಕ್ಕಳಲ್ಲಿ ಬಾಲ್ಯದಿಂದಲೇ ಸಂಸ್ಕಾರ, ಮಾನವೀಯ ಮೌಲ್ಯ ಬಿತ್ತುವ ಕೆಲಸ ಮಾಡಬೇಕು ಎಂದು ಅರಸೀಕೆರೆ ಯಳನಾಡು ಮಹಾ ಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಅಜ್ಜಂಪುರ ಪಟ್ಟಣದ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನೊಳಂಬ ಲಿಂಗಾಯತ ಸಮುದಾಯದಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಆಧುನಿಕತೆಯ ದುಷ್ಪರಿಣಾಮದಿಂದ ಗುರು-ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿ ಮರೆಯಾಗುತ್ತಿದೆ. ಮಕ್ಕಳು ಶಿಕ್ಷಿತರಾಗಿ ವೈಯಕ್ತಿಕ ಭವಿಷ್ಯ ರೂಪಿಸಿಕೊಳ್ಳುವುದಲ್ಲದೆ ದೇಶದ ಆಸ್ತಿಯಾಗಬೇಕು. ಜ್ಞಾನ ಸಂಪಾದಿಸಿ ಮುಂದಿನ ಪೀಳಿಗೆಗೆ ಮಾರ್ಗದರ್ಶಿಗಳಾಗಬೇಕು ಎಂದರು.
ಸನ್ಮಾನ ಸ್ವೀಕರಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮಾಜ ಸಂಘಟಿತವಾದಾಗ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮಾತ್ರವಲ್ಲ, ಆರ್ಥಿಕ ಪ್ರಗತಿ ಕೂಡ ಸುಲಭವಾಗಲಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಎಸ್.ಎಂ.ನಾಗರಾಜ್ ಮಾತನಾಡಿ, ನೊಳಂಬ ಲಿಂಗಾಯತ ಸಂಘ ಸಮಾಜದ ಅಭ್ಯುದಯಕ್ಕೆ ಶ್ರಮಿಸುತ್ತಿದೆ. ಅಲ್ಲದೆ ಪ್ರತಿಭಾ ಪುರಸ್ಕಾರ, ಧಾರ್ಮಿಕ ಸಭೆ ಆಯೋಜಿಸಿ ಸಮಾಜ ಸರಿ ದಾರಿಗೆ ನಡೆಯುವಂತೆ ಮಾಡುತ್ತಿದೆ ಎಂದರು.
ಎಂಎಲ್ಸಿ ಎಸ್.ಎಲ್.ಬೋಜೇಗೌಡ, ಮಾಜಿ ಶಾಸಕ ಡಿ.ಎಸ್.ಸುರೇಶ್, ನೊಳಂಬ ಲಿಂಗಾಯತ ಸಂಘದ ಬೆಂಗಳೂರು ಅಧ್ಯಕ್ಷ ಬಿ.ಕೆ.ಚಂದ್ರಶೇಖರ್, ಮಾಜಿ ಜಿಪಂ ಅಧ್ಯಕ್ಷ ಕೆ.ಆರ್.ಧ್ರುವಕುಮಾರ್, ಉಪಾಧ್ಯಕ್ಷ ಶಂಭೈನೂರು ಆನಂದಪ್ಪ, ಸದಸ್ಯ ಎಂ.ಕೃಷ್ಣಮೂರ್ತಿ, ಜಿಲ್ಲಾ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಗಿರೀಶ್ ಚವ್ಹಾಣ್ ಮತ್ತಿತರರಿದ್ದರು.