ಅಧ್ಯಾತ್ಮ ಲೋಕದ ಬ್ರಹ್ಮಜ್ಞಾನಿ ಶ್ರೀ ಗಣಪತರಾವ್ ಮಹಾರಾಜರ 116ನೇ ಜಯಂತ್ಯುತ್ಸವ ನಿಮಿತ್ತ 2024ರ ಗಣೇಶ ಚತುರ್ಥಿ ಸಪ್ತಾಹ ಆಗಸ್ಟ್ 30ರಿಂದ ವಿಜಯಪುರ ಜಿಲ್ಲೆಯ ಕನ್ನೂರು ಗ್ರಾಮದ ಶಾಂತಿಕುಟೀರದಲ್ಲಿ ಆರಂಭವಾಗಿದ್ದು ಇಂದು (ಸೆ.7) ಕೊನೆಯದಿನ.
| ಶ್ರೀಕೃಷ್ಣ ಸಂಪಗಾಂವಕರ
‘ಮರಣ ಹೊಂದಿದ ಮೇಲೆ ಕೈಲಾಸ ಅಥವಾ ವೈಕುಂಠ ಸೇರುವುದು ಮುಕ್ತಿಯಲ್ಲ; ಜೀವಿತ ಕಾಲದಲ್ಲೇ ಈ ಭವದ ಬಂಧನದಿಂದ ಬಿಡುಗಡೆ ಹೊಂದುವುದು ಮುಕ್ತಿ. ಇದಕ್ಕಾಗಿ ಸಂಸಾರ, ಪ್ರಪಂಚ ತ್ಯಾಗ ಮಾಡುವ ಅವಶ್ಯಕತೆಯೂ ಇಲ್ಲ. ಪ್ರತಿಯೊಬ್ಬರೂ ತಾವಿರುವ ಪರಿಸ್ಥಿತಿಯಲ್ಲೇ ಪ್ರಪಂಚದ ಕೆಲಸಗಳನ್ನು ಸಹಜವಾಗಿ ಮಾಡುತ್ತ ಜೀವನ್ಮುಕ್ತಿಯನ್ನು ಹೊಂದಬಹುದು. ಇದಕ್ಕೆ ನಾನು ಯಾರು? ಎಂಬುದನ್ನು ಅರಿಯಬೇಕು. ಇದೇ ಆತ್ಮಜ್ಞಾನ. ಇದು ಪ್ರತಿಯೊಬ್ಬ ಮಾನವನ ಕರ್ತವ್ಯವೂ ಆಗಿದೆ’ ಎಂದು ಪ್ರಾಪಂಚಿಕರಿಗೆ ಸುಲಭವಾಗಿ ಆತ್ಮಜ್ಞಾನ ರಹಸ್ಯವನ್ನು ತಿಳಿಸಿದವರು ನಾಥ ಸಂಪ್ರದಾಯದ ಸಂತ ವಿಜಯಪುರದ ಸಮರ್ಥ ಸದ್ಗುರು ಗಣಪತರಾವ್ ಮಹಾರಾಜರು.
ಮಹಾರಾಜರು ಮರಾಠಿ ಹಾಗೂ ಕನ್ನಡದಲ್ಲಿ ಉಪದೇಶವನ್ನು ನೀಡಿದ್ದು, ಇವರ ಭಕ್ತರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದ್ದಾರೆ. 1909ರ ಗಣೇಶ ಚೌತಿಯಂದು ವಿಜಯಪುರ ಜಿಲ್ಲೆಯ ಕನ್ನೂರ ಗ್ರಾಮದಲ್ಲಿ ಜನಿಸಿದ ಇವರಿಗೆ ಬಾಲ್ಯದಿಂದಲೇ ಅಧ್ಯಾತ್ಮದ ಕಡೆಗೆ ಒಲವಿತ್ತು. ಇಂಚಗೇರಿ ಸಂಪ್ರದಾಯದ ಪ್ರವರ್ತಕರಾದ ಭಾವೂಸಾಹೇಬ್ ಮಹಾರಾಜರ ಶಿಷ್ಯರಾದ ಸಿದ್ಧರಾಮೇಶ್ವರ ಮಹಾರಾಜರಿಂದ 13ನೇ ವಯಸ್ಸಿಗೆ ಉಪದೇಶ ಪಡೆದು ಅಧ್ಯಾತ್ಮ ಜೀವನದತ್ತ ಹೆಜ್ಜೆ ಹಾಕಿದರು. ಪುಣೆಯ ಪ್ರತಿಷ್ಠಿತ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡೆದರೂ ಕನ್ನೂರಿನ ತಮ್ಮ ತೋಟದ ಕೆಲಸದೊಂದಿಗೆ ಅಧ್ಯಾತ್ಮ ಸಾಧನೆಗೆ ತೊಡಗಿದರು. ಹೊಲದಲ್ಲಿದ್ದ ಅವರ ಪುಟ್ಟ ಮನೆ ಕಾಲಾನಂತರ ವಿಶಾಲವಾದ ‘ಶಾಂತಿಕುಟೀರ ಆಶ್ರಮ’ವಾಯಿತು.
ಶಾಂತಿಕುಟೀರ ಆಶ್ರಮ: 1955ರಿಂದ ಕನ್ನೂರಿನ ಮನೆಗೆ ಆತ್ಮಜ್ಞಾನ ವಿಷಯವನ್ನು ತಿಳಿಯಲು ಕೆಲ ಭಕ್ತರು ಆಗಮಿಸಲಾರಂಭಿಸಿ ದರು. ದಿನಗಳುರುಳಿದಂತೆ ಭಕ್ತರ ಸಂಖ್ಯೆ ಹೆಚ್ಚುತ್ತ ಹೋಗಿ, ‘ಶಾಂತಿಕುಟೀರ’ ಆಶ್ರಮ ಸ್ಥಾಪನೆಯಾಯಿತು. ಈಗ ಅದು ಸುಮಾರು 2000 ಭಕ್ತರು ಕೂಡುವಂತಹ ದೊಡ್ಡ ಪ್ರವಚನ ಮಂದಿರ, ವಿಶಾಲ ಭೋಜನ ಶಾಲೆ, ಉಳಿದುಕೊಳ್ಳಲು ನೂರಕ್ಕೂ ಹೆಚ್ಚು ಕೋಣೆಗಳ ಭಕ್ತಿಕುಟೀರ, ಗೋಶಾಲೆ ಎಲ್ಲವನ್ನೂ ಒಳಗೊಂಡಿದೆ. ವಿಜಯಪುರದಿಂದ ಸೊಲ್ಲಾಪುರ ಮಾರ್ಗವಾಗಿ ತಿಡಗುಂದಿ ಕತ್ತರಿಯಿಂದ ಎಡಕ್ಕೆ 5 ಕಿ.ಮೀ. ದೂರದಲ್ಲಿ ಈ ಶಾಂತಿಕುಟೀರ ಆಶ್ರಮವಿದೆ.
ಶ್ರೀಗಳ ಸಾಹಿತ್ಯ ಸೇವೆ: ಗ್ರಂಥರೂಪದಲ್ಲಿ ಅಧ್ಯಾತ್ಮ ಸಾಹಿತ್ಯ ಕೊಡಮಾಡುವ ವಿಚಾರದಿಂದ ಅಧ್ಯಾತ್ಮ ಭಂಡಾರವನ್ನು ಸ್ಥಾಪಿಸಿದರು. ಇದರ ಮೂಲಕ ಸಮರ್ಥ ರಾಮದಾಸರ ಮರಾಠಿ ಕೃತಿಯಾದ ‘ದಾಸಬೋಧ’ವನ್ನು ಕನ್ನಡಕ್ಕೆ ಅನುವಾದಿಸಿದರು. ‘ಪರಮಾರ್ಥ ಮಾರ್ಗ ಪ್ರದೀಪ’, ‘ಮನೋಬೋಧ’, ‘ವಿವೇಕ ಕುಂಜ’, ‘ಯಶಸ್ವೀ ಜೀವನ’, ‘ಅಷ್ಟಾವಕ್ರ ಗೀತಾ’, ‘ಗುರುಗೀತಾಸಾರ’, ‘ಸುಲಭ ವೇದಾಂತವಾಹಿನಿ’, ‘ಆತ್ಮಾನುಭವದ ಸಾಧನಗಳು’ ಹೀಗೆ ಅನೇಕ ಗ್ರಂಥಗಳನ್ನು ಗಣಪತರಾವ್ ರಚಿಸಿದ್ದಾರೆ.
ತಮ್ಮ ಅವತಾರ ಸಮಾಪ್ತಿಯ ಮುನ್ನ ಅಧ್ಯಾತ್ಮ ಕ್ಷೇತ್ರದಲ್ಲಿ ಅತ್ಯುತ್ತಮವೆನಿಸಿರುವ ಮೇರುಕೃತಿ ‘ಸುಲಭ ಆತ್ಮಜ್ಞಾನ’ವನ್ನು ರಚಿಸಿ ಈ ಗ್ರಂಥದ ಸ್ವರೂಪವೇ ತಮ್ಮ ನಿರಂತರ ಅಸ್ತಿತ್ವ ಎಂದು ಸಾರಿದ್ದಾರೆ. ಮಹಾರಾಜರ ಶಿಷ್ಯರಲ್ಲಿ ‘ಸುಲಭ ಆತ್ಮಜ್ಞಾನ’ ಗ್ರಂಥವನ್ನು ನಿತ್ಯ ಮನನ ಗ್ರಂಥವಾಗಿ ಅಭ್ಯಸಿಸುವ ಪರಿಪಾಠವಿದೆ. ಈ ಗ್ರಂಥವು ಇಲ್ಲಿಯವರೆಗೆ ತೆಲುಗು, ಮರಾಠಿ, ಹಿಂದಿ, ಗುಜರಾತಿ, ಇಂಗ್ಲಿಷ್, ಜರ್ಮನ್, ಫ್ರೆಂಚ್, ಸ್ಪಾ್ಯನಿಷ್ ಭಾಷೆಗಳಲ್ಲಿಯೂ ತರ್ಜುಮೆಗೊಂಡಿರುವುದು ವಿಶೇಷ.
=ಸಮಾಜಸೇವೆಯಲ್ಲಿ ಶ್ರೀಗಳು: ಸಮರ್ಥ ಸದ್ಗುರುಗಳು ‘ಭಾರ ತೀಯ ಸುರಾಜ್ಯ ಸಂಸ್ಥೆ’ ಎಂಬ ರಾಜಕೀಯೇತರ ಸಂಘಟನೆಯನ್ನು 1993ರಲ್ಲಿ ಹುಟ್ಟುಹಾಕಿದರು. ಆ ಮೂಲಕ, ಸಮಾಜದಲ್ಲಿನ ಭ್ರಷ್ಟಾಚಾರ, ಅಪ್ರಾಮಾಣಿಕತೆ, ದುಶ್ಚಟ, ಅನೀತಿಗಳನ್ನು ಹೋಗಲಾಡಿಸಲು ಶ್ರಮಿಸಿ ದರು. ಶಾಲೆಗಳಲ್ಲಿ ಮಕ್ಕಳಿಗೆ ನೀತಿಪಾಠ, ಉತ್ತಮ ಸಂಸ್ಕಾರಗಳನ್ನು ನೀಡುವ ಬೇಸಿಗೆ ಶಿಬಿರಗಳನ್ನು ಆಶ್ರಮದಲ್ಲಿ ಆಯೋಜಿಸಿದರು. ದಿಂಡಿಯಾತ್ರೆಗಳ ಮೂಲಕ ಗ್ರಾಮಸ್ಥರಿಗೆ ಪ್ರಾಮಾಣಿಕರಾಗಿ, ನೀತಿವಂತರಾಗಿರ ಬೇಕೆಂಬ ಸಂದೇಶವನ್ನು ನೀಡಿದರು. ಒಟ್ಟು ಆರು ದಿಂಡಿಗಳ ಮೂಲಕ ಈಗಲೂ ಪ್ರತಿ ವರ್ಷ ಚೈತ್ರ ಮಾಸದಲ್ಲಿ ಎರಡು ನೂರಕ್ಕೂ ಹೆಚ್ಚು ಗ್ರಾಮ ಗಳಿಗೆ ಭಕ್ತರು ಭೇಟಿ ನೀಡಿ ಸಂಸ್ಥೆಯ ತತ್ವವನ್ನು ಪ್ರಚಾರ ಮಾಡುತ್ತಿದ್ದಾರೆ.
‘ರಾಮರಾಜ್ಯ ಕಲಾಮೇಳ’ ಎಂಬ ಸಾಂಸ್ಕೃತಿಕ ಕೂಟವನ್ನು ಸದ್ಗುರುಗಳ ಆಪ್ತ ಶಿಷ್ಯರಲ್ಲೊಬ್ಬರಾದ ಶ್ರೀಕೃಷ್ಣ ಗುರುಗಳ ನೇತೃತ್ವದಲ್ಲಿ ಸ್ಥಾಪಿಸಿ ಬೀದಿನಾಟಕ, ಭಾರೂಡ, ಕೀರ್ತನೆಗಳ ಮೂಲಕ ಜನಸಾಮಾನ್ಯರು ಸರಿದಾರಿಯಲ್ಲಿ ನಡೆಯಲು ಪ್ರೇರೇಪಿಸಿದರು. ‘ಎಲ್ಲರನ್ನೂ ನಿಷ್ಕಾರಣದಿಂದ ಪ್ರೀತಿಸಿ; ಸದಾ ಆನಂದದಿಂದಿರಿ’ ಎಂದು ಉಪದೇಶ ನೀಡಿ ಅದರಂತೆಯೇ ನಡೆದು ತೋರಿಸಿದರು. ಅವರು ಅನುಭಾವಿ ಸಂತಶ್ರೇಷ್ಠ.
(ಲೇಖಕರು ಅಧ್ಯಾತ್ಮ ಚಿಂತಕರು, ಶಾಂತಿಕುಟೀರ)