ನ್ಯೂಸ್

ಇಂದಿನಿಂದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥಾರೋಹಣೋತ್ಸವ

ಹುಣಸೂರು: ನಗರದ ಹೃದಯಭಾಗದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿತಟದಲ್ಲಿರುವ ಬ್ರಾಹ್ಮಣರ ಬೀದಿಯ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವರ 188ನೇ ವರ್ಷದ ದಿವ್ಯ ರಥಾರೋಹಣೋತ್ಸವ ಮೇ 23ರಂದು ಜರುಗಲಿದೆ ಎಂದು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಅರ್ಚಕ ಹಾಗೂ ರಥಾರೋಹಣೋತ್ಸವ ಕಾರ್ಯಕ್ರಮದ ಸಂಚಾಲಕ ಎಚ್.ಆರ್.ಗುರುರಾಜ್ ತಿಳಿಸಿದ್ದಾರೆ.

ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಸಹಯೋಗದಲ್ಲಿ ಮೇ 21ರಿಂದ 27ರವರೆಗೆ ವಿವಿಧ ಸೇವಾ ವಾರಕಾಲ ನಡೆಯಲಿವೆ. ಮೇ 21ರಂದು ಅಂಕುರಾರ್ಪಣೆ, ಧ್ವಜಾರೋಹಣ ಮತ್ತು ಹಂಸವಾಹನೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಮೇ 22ರಂದು ಕಲ್ಯಾಣೋತ್ಸವ, ಪ್ರಹ್ಲಾದ ಪರಿಪಾಲನೋತ್ಸವ ಮತ್ತು ಗರುಡ ವಾಹನೋತ್ಸವ ನಡೆಯಲಿದೆ. ಮೇ 23ರಂದು ಬೆಳಗ್ಗೆ 9.30ಕ್ಕೆ ದೇವರ ದಿವ್ಯ ರಥಾರೋಹಣೋತ್ಸವ ಜರುಗಲಿದೆ. ರಥವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ಸಂಜೆ 6.30ಕ್ಕೆ ಬೆಂಗಳೂರಿನ ಶೃತಿಭಟ್ ಮತ್ತು ತಂಡದವರಿಂದ ಹರಿದಾಸ ನಾಮಸಂಕೀರ್ತನೆ ಆಯೋಜಿಸಲಾಗಿದೆ.

ಮೇ 24ರಂದು ಮಹಾವಿಷ್ಣುಯಾಗ, ಶೇಷವಾಹನೋತ್ಸವ, ಡೋಲೋತ್ಸವ ಮತ್ತು ಗಜವಾಹನೋತ್ಸವ ನಡೆಯಲಿದೆ. ಮೇ 25ರಂದು ಹಗಲು ವಸಂತೋತ್ಸವ, ಪುಷ್ಪಯಾನೋತ್ಸವ ಮತ್ತು ಅಶ್ವಾರೋಹಣೋತ್ಸವ ನಡೆಯಲಿದೆ. ಮೇ 26ರಂದು ಸಹಸ್ರ ತುಳಸಿ ಅರ್ಚನೆ, ಹನುಮತೋತ್ಸವ, ಪೂರ್ಣಾಹುತಿ ಮತ್ತು ಧ್ವಜಾರೋಹಣೋತ್ಸವ ಜರುಗಲಿದೆ. ಮೇ 27ರಂದು ಹಗಲು ಮಹಾಭಿಷೇಕ ಮತ್ತು ರಾತ್ರಿ ಶಯನೋತ್ಸವ ಕಾರ್ಯಕ್ರಮ ನಡೆಯುವ ಮೂಲಕ ದೇವರ ದಿವ್ಯ ರಥಾರೋಹಣೋತ್ಸವ ಧಾರ್ಮಿಕ ಕಾರ್ಯ ಸಂಪನ್ನಗೊಳ್ಳಲಿದೆ. ಪ್ರತಿದಿನದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಸೇವಾರ್ಥದಾರ ಭಕ್ತರ ಸಹಕಾರದಲ್ಲಿ ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.