ನವದೆಹಲಿ: ಅಕ್ಟೋಬರ್ 12ರಂದು ಎನ್ಸಿಪಿ ನಾಯಕ ಬಾಬಾ ಸಿದ್ದಕ್ಕಿರನ್ನು (Baba Siddique) ಹತ್ಯೆ ಮಾಡಿಸುವ ಮೂಲಕ ವಿಶ್ವದಾದ್ಯಂತ ಸೌಂಡ್ ಮಾಡಿರುವ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ (Lawrence Bishnoi) ಮುಂದಿನ ಟಾರ್ಗೆಟ್ ಸಲ್ಮಾನ್ ಖಾನ್ ಎಂದು ಹೇಳಲಾಗಿದ್ದು, ಈತನಿಗೆ ಸಂಬಂಧಿಸಿದ ಸುದ್ದಿಗಳು ಸಖತ್ ವೈರಲ್ ಆಗುತ್ತಿವೆ. ಇದೀಗ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲ, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಹಿಟ್ಲಿಸ್ಟ್ನಲ್ಲಿದ್ದಾನೆ ಎಂದು ವರದಿಯಾಗಿದ್ದು ದೆಹಲಿ ಕೇಂದ್ರ ಕಾರಾಗೃಹದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಹತ್ಯೆಯಾದ ಎನ್ಸಿಪಿ ನಾಯಕ ಬಾಬಾ ಸಿದ್ದಕ್ಕಿ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾಗ ಪೊಲೀಸರಿಗೆ ಈ ವಿಚಾರ ಬೆಳಕಿಗೆ ಬಂದಿದ್ದು, ಬಂಧಿತ ಆರೋಪಿಗಳ ಪೈಕಿ ಓರ್ವ ಈ ಬಗ್ಗೆ ಮಾತನಾಡಿದ್ದು, ಪೊಲೀಸರು ದೆಹಲಿ ತಿಹಾರ್ ಜೈಲಿನಲ್ಲಿರುವ ಅಫ್ತಾಬ್ ಸೆಲ್ಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಈ ಕುರಿತು ಮಾತನಾಡಿರುವ ತಿಹಾರ್ ಜೈಲಿನ ಹಿರಿಯ ಪೊಲೀಸ್ ಆಧಿಕಾರಿಯೊಬ್ಬರು, ಬಿಷ್ಣೋಯಿ (Lawrence Bishnoi) ಗ್ಯಾಂಗ್‌ನಿಂದ ಪೂನಾವಾಲಾಗೆ ಬೆದರಿಕೆಯ ಕುರಿತು ನಮಗೆ ಪೊಲೀಸರು ಅಥವಾ ಭದ್ರತಾ ಏಜೆನ್ಸಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಸೂಚನೆ ಬಂದರೆ ಪೂನಾವಾಲಾಗೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
2022ರ ಮೇ 18ರಂದು ಅಫ್ತಾಬ್ ತನ್ನ ಲಿವ್ ಇನ್ ಪಾರ್ಟನರ್ ಶ್ರದ್ಧಾ ವಾಲ್ಕರ್ರನ್ನು ಹತ್ಯೆ ಮಾಡಿ ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟಿದ. ಬಳಿಕ ಆಕೆಯ ಮೃತದೇಹದ ತುಂಡುಗಳನ್ನು ದೆಹಲಿಯ ಮೆಹ್ರೌಲಿಯ ಕಾಡು ಪ್ರದೇಶದಲ್ಲಿ ಎಸೆದಿದ್ದ. ಆ ಬಳಿಕ ಪೊಲೀಸರು ತನಿಖೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದರು. ಸದ್ಯ ಆತನನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.