ರಾಣೆಬೆನ್ನೂರ: ಅಲ್ಲಾನ ಆರಾಧನೆ ಮತ್ತು ಉಪವಾಸ ಮಾಸದ ಪ್ರತೀಕವಾದ ಪವಿತ್ರ ರಂಜಾನ್ ಹಬ್ಬವನ್ನು ನಗರದ ಮುಸ್ಲಿಂ ಬಾಂಧವರು ಗುರುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಇಲ್ಲಿನ ಮಾರುತಿ ನಗರದ ಈದ್ಗಾ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಸಮಾಜದ ಬಾಂಧವರು ಮೌಲ್ವಿಗಳ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಬಾಲವೃದ್ಧರಾಗಿ ಹೊಸಬಟ್ಟೆಗಳನ್ನು ಧರಿಸಿದ ಎಲ್ಲರೂ ಒಂದಾಗಿ ಬಂದು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ನಂತರ ಒಬ್ಬರಿಗೊಬ್ಬರು ಆಲಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ಕೋರಿದರು. ಉಳ್ಳವರು ಇಡೀ ವರ್ಷದ ಆದಾಯದಲ್ಲಿ ಉಳಿತಾಯ ಮಾಡಿದ ಹಣದಲ್ಲಿ ಬಡವರಿಗೆ ದವಸ, ಧಾನ್ಯಗಳನ್ನು ಕಾಣಿಕೆಯಾಗಿ ನೀಡಿದರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಎಚ್.ಎಫ್. ಬಿದರಿ, ಉಪಾಧ್ಯಕ್ಷ ಜಬೀವುಲ್ಲಾ ದಾವಣಗೇರಿ, ಕಾರ್ಯದರ್ಶಿ ರಫೀಕ್ ಮೆಣಸಿನಕಾಯಿ, ಖಜಾಂಚಿ ಆರ್.ಬಿ. ಕುಪ್ಪೇಲೂರ, ಸದಸ್ಯರಾದ ಶೇರುಖಾನ ಕಾಬೂಲಿ, ಬಾಷಾಸಾಬ ಹಾವನೂರ, ಅತಾವುಲ್ಲಾ ಉದಗಟ್ಟಿ, ಅಬ್ದುಲ್ ವಹಾಬ್ ಶಾಫಿ, ನೂರುಲ್ಲಾ ಖಾಜಿ ಮತ್ತಿತರರು ಪಾಲ್ಗೊಂಡಿದ್ದರು.