ನ್ಯೂಸ್

ಪ್ರಕರಣದ ಬಗ್ಗೆ ತಿಳಿದು ಬರಬೇಕು: ಕಿರಿಯ ವಕೀಲೆಗೆ ಹೈಕೋರ್ಟ್ ಕಿವಿಮಾತು

ಬೆಂಗಳೂರು: ಪ್ರಕರಣ ಮುಂದೂಡುವ ವಿಚಾರ ಆಮೇಲೆ, ಈ ಕೇಸ್ ಏನು ಎಂಬುದರ ಬಗ್ಗೆ ಚಿಕ್ಕದಾಗಿ ಹೇಳಿ ನೋಡೋಣ? ನಿಮ್ಮ ಹಿರಿಯ ವಕೀಲರು ಗೈರಾಗಿದ್ದ ಸಂದರ್ಭದಲ್ಲಿ ಪ್ರಕರಣದ ಕುರಿತು ತಿಳಿದು ಬಳಿಕ ನ್ಯಾಯಾಲಯದ ಮುಂದೆ ಬರಬೇಕು. ಸುಖಾಸುಮ್ಮನೆ ಬರುವುದಲ್ಲ...

ಕಿರಿಯ ವಕೀಲೆಯೊಬ್ಬರಿಗೆ ಹೈಕೋರ್ಟ್ ಕಿವಿಮಾತು ಹೇಳಿದ್ದು ಹೀಗೆ.

ಪ್ರಕರಣವೊಂದರ ವಿಚಾರಣೆ ವೇಳೆ ಕಿರಿಯ ವಕೀಲೆ, ವಾದ ಮಂಡಿಸಿಬೇಕಾಗಿರುವ ವಕೀಲರು ರಜೆಯಲ್ಲಿದ್ದಾರೆ, ಹಾಗಾಗಿ ಪ್ರಕರಣವನ್ನು ಮುಂದೂಡಬೇಕೆಂದು ಮನವಿ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಸ್. ಕೃಷ್ಣ ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ, ಮುಂದೂಡುವ ವಿಚಾರ ಆಮೇಲೆ. ಮೊದಲು ಈ ಪ್ರಕರಣ ಏನು ಎಂಬುವುದನ್ನು ಚಿಕ್ಕದಾಗಿ ಹೇಳಿ ಎಂದಿತು.

ಆಗ ವಕೀಲೆ, ‘ಇದು ರಿಟ್ ಅಪೀಲ್’ ಎಂದರು. ಆಗ ನ್ಯಾಯಮೂರ್ತಿಗಳು, ‘ಏನು? ಸರಿಯಾಗಿ ಇನ್ನೊಮ್ಮೆ ನೋಡಿ’ ಎಂದರು. ಮತ್ತೆರೆಡು-ಮೂರು ಬಾರಿ ವಕೀಲೆ, ‘ರಿಟ್ ಅಪೀಲ್’ಎಂದು ಬಳಿಕ ‘ರಿಟ್ ಪಿಟಿಷನ್’ ಎಂದು ಉತ್ತರಿಸಿದರು. ನ್ಯಾಯಮೂರ್ತಿಗಳು ಸಮಾಧಾನದಿಂದಲೇ, ನೋಡಿ ನಿಮ್ಮ ಹಿರಿಯ ವಕೀಲರು ಗೈರಾಗಿದ್ದಾರೆ ಎಂದಾಗ ಪ್ರಕರಣದ ಕುರಿತು ತಿಳಿದು ಬಳಿಕ ನ್ಯಾಯಾಲಯದ ಮುಂದೆ ಬರಬೇಕು. ಇದೆಲ್ಲ ಕಲಿಕಾ ಪ್ರಕ್ರಿಯೆಯ ಭಾಗ. ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಸುಮ್ಮನೆ ಪ್ರಕರಣ ಮುಂದೂಡುವಂತೆ ಮನವಿ ಮಾಡಬಾರದು ಎಂದರು.

ಚಕಿತಗೊಂಡ ವಕೀಲೆ, ಏನು ಪ್ರತಿಕ್ರಿಯಿಸದಿದ್ದಾಗ, ನ್ಯಾಯಮೂರ್ತಿಗಳು ‘ಸರಿಯಲ್ಲವೇ? ತಿಳಿದುಕೊಂಡು ಬರಬೇಕಲ್ಲವೇ? ಇಲ್ಲದೆ ಹೋದರೆ ನಿಮ್ಮ ಹಿರಿಯ ವಕೀಲರ ಬಳಿ ತೆರಳಿ, ನಾನು ಪ್ರಕರಣವನ್ನು ಮುಂದೂಡುವಂತೆ ಹೇಳಿದೆ. ನ್ಯಾಯಮೂರ್ತಿಗಳು ಕೇಳಿಲ್ಲ ಎಂದು ನಮ್ಮ ಮೇಲೆ ಅಪಾದನೆ ಮಾಡಿದರಾದಿತೇ’ ಎಂದರು.

ಮುಕ್ತ ನ್ಯಾಯಾಲಯದಲ್ಲಿ ಕುಳಿತಿರುವ ನಿಮ್ಮನ್ನು ಗಮನಿಸುತ್ತಲೇ ಇದ್ದು, ನಿಮ್ಮ ಕೈಯಲ್ಲಿರುವ ಕಡತದ ಕಡೆಗೆ ನೀವು ಒಮ್ಮೆಯೂ ಕಣ್ಣು ಹಾಯಿಸಲಿಲ್ಲ. ಇದೆಲ್ಲವೂ ಒಪ್ಪುವಂತದಲ್ಲ ಎಂದು ತಾಳ್ಮೆಯಿಂದಲೇ ವಕೀಲೆಗೆ ವೃತ್ತಿಪರತೆ ರೂಢಿಸಿಕೊಳ್ಳುವ ಬಗ್ಗೆ ನ್ಯಾಯಮೂರ್ತಿಗಳು ತಿಳಿ ಹೇಳಿದರು.