Patna: ಬಿಹಾರದ ಮೊದಲ ಹಂತದ ಚುನಾವಣೆಗೆ (Bihar Election) ಕೇವಲ ಎರಡು ದಿನ ಬಾಕಿ ಉಳಿದಿದ್ದು, ಪ್ರಚಾರದ ಅಬ್ಬರ ಜೋರಾಗಿದೆ. ಸೋಮವಾರ (ನ 3) ರಾಜ್ಯದಲ್ಲಿ ಮಾತನಾಡಿರುವ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಹರ್ಸಾ ಜಿಲ್ಲೆಯ ಸೋನಾಬರ್ಸಾದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ ವಾದ್ರಾ, ಪ್ರಧಾನಿ ಮೋದಿ ದೇಶ ಮತ್ತು ಬಿಹಾರವನ್ನು ಅವಮಾನಿಸಲು ತಮ್ಮ ಗಮನವನ್ನು ಕೇಂದ್ರಿಕರಿಸಿದೆ, ಆದ್ದರಿಂದ ಅವರು ಅವಮಾನ ಸಚಿವಾಲಯವನ್ನು ರಚಿಸುವುದು ಸೂಕ್ತ ಎಂದು ಟೀಕಿಸಿದ್ದಾರೆ.
ಪ್ರಧಾನಿ ತಮ್ಮ ಚುನಾವಣಾ ಭಾಷಣದಲ್ಲಿ ಅನಗತ್ಯ ವಿಷಯಗಳ ಬಗ್ಗೆ ಮಾತನಾಡಿದ್ದಾರೆ, ಆದರೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ತಮ್ಮದೇ ಎನ್‌ಡಿಎ ಸರ್ಕಾರದ ಭ್ರಷ್ಟಾಚಾರ ಅಥವಾ ದುರಾಡಳಿತದ ಬಗ್ಗೆ ಒಂದು ಮಾತನ್ನೂ ಆಡುತ್ತಿಲ್ಲ, ಅಭಿವೃದ್ಧಿಯ ಬಗ್ಗೆ ಮಾತನಾಡುವ ಬದಲು, ಪ್ರತಿಯೊಬ್ಬ ವಿರೋಧ ಪಕ್ಷದ ನಾಯಕರನ್ನು, ರಾಷ್ಟ್ರ ಮತ್ತು ಬಿಹಾರವನ್ನು ಅವಮಾನಿಸಿದ್ದಾರೆ ಎಂದರು. ಚುನಾವಣೆಯ ಸಂದರ್ಭದಲ್ಲಿ ಬಿಹಾರಕ್ಕೆ ಪರಿಹಾರ ಘೋಷಿಸುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ, ಕಳೆದ 20 ವರ್ಷಗಳಲ್ಲಿ ಎನ್‌ಡಿಎ ರಾಜ್ಯಕ್ಕೆ ಏನು ಮಾಡಿದೆ ಎಂದು ಉತ್ತರಿಸಬೇಕು, ಬಿಹಾರ ಸರ್ಕಾರವನ್ನು ದೆಹಲಿಯಿಂದ ರಿಮೋಟ್ ಕಂಟ್ರೋಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ನಿತೀಶ್ ಕುಮಾರ್ ಸರ್ಕಾರವನ್ನು ನಡೆಸುವುದಿಲ್ಲ. ಪ್ರಧಾನಿ ಮತ್ತು ಕೇಂದ್ರದಲ್ಲಿರುವ ನಾಯಕರು ಈ ಕೆಲಸ ಮಾಡುತಿದ್ದಾರೆ, ಇಲ್ಲಿನ ಎನ್‌ಡಿಎ ಸರ್ಕಾರ ಸಂವಿಧಾನವೇ ನೀಡಿರುವ ಮತದಾನದ ಹಕ್ಕನ್ನು ಬೆದರಿಸುತ್ತಿದೆ, ಬಿಹಾರದ ಯುವಕರು ಉದ್ಯೋಗಗಳಿಲ್ಲದ ಕಾರಣ ರಾಜ್ಯವನ್ನು ತೊರೆಯುವಂತೆ ಒತ್ತಾಯಿಸಲಾಗುತ್ತಿದೆ. ಉದ್ಯೋಗ ಸೃಷ್ಟಿಸುತ್ತಿದ್ದ ಎಲ್ಲಾ ಪ್ರಮುಖ ಸಾರ್ವಜನಿಕ ಉದ್ದಿಮೆಗಳನ್ನು ಬಿಜೆಪಿ ನಾಯಕರ ಸ್ನೇಹಿತರುಗಳಾದ ದೊಡ್ಡ ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟವು 'ಛಠಿ ಮೈಯ್ಯ' ಅವರನ್ನು ಅವಮಾನಿಸುತ್ತಿದೆ , "ಅಯೋಧ್ಯೆಯಲ್ಲಿ ರಾಮ ಮಂದಿರದ ಸಮಸ್ಯೆಗಳಿವೆ" ಮತ್ತು ಮತ ಬ್ಯಾಂಕ್ ಮತ್ತು ಓಲೈಕೆ ರಾಜಕೀಯಕ್ಕಾಗಿ "ಒಳನುಸುಳುಕೋರರನ್ನು ರಕ್ಷಿಸುತ್ತಿದೆ" ಎಂದು ಆರೋಪಿಸಿದ ಕೆಲವೇ ದಿನಗಳಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್‌ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)