ಚಿಕ್ಕಬಳ್ಳಾಪುರ: ರಾಜ್ಯ ಕೃಷಿ ಇಲಾಖೆಯಲ್ಲಿ ಶೇ.57 ರಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿದ್ದು ಇದನ್ನು ನೀಗಿಸುವ ಉದ್ದೇಶದಿಂದ ಮೊದಲ ಹಂತದಲ್ಲಿ 950 ವಿವಿಧ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಬ್ಬಂದಿಯನ್ನು ನೇಮಕಾತಿಗೆ ಆರ್ಥಿಕ ಇಲಾಖೆಯು ಅನುಮತಿ ನೀಡಿದೆ. ಆಯ್ಕೆ ಪ್ರಕ್ರಿಯೆ ನಿರ್ವಹಣೆಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದರು.
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಗೆ ದೊಡ್ಡ ಅಣೆಕಟ್ಟುಗಳು ನೀರಿನಿಂದ ತುಂಬಿದ್ದು ಈಗಾಗಲೇ ಬಿತ್ತನೆಯಲ್ಲಿ ಶೇ.84 ರಷ್ಟು ಸಾಧನೆಯಾಗಿದೆ ಎಂದರು.
ಹಸಿರೆಲೆ ಗೊಬ್ಬರಕ್ಕಾಗಿ ಇತ್ತೀಚೆಗೆ 15 ಕೋಟಿ ರೂ ಬಿಡುಗಡೆಗೊಳಿಸಿದ್ದು ರಾಜ್ಯದ ಎಲ್ಲ ತಾಲೂಕುಗಳಿಗೆ ಕೃಷಿ ಭಾಗ್ಯ ಯೋಜನೆಯನ್ನು ವಿಸ್ತರಿಸಲಾಗಿದೆ. ರಾಜ್ಯದ 17 ಲಕ್ಷ ರೈತರಿಗೆ 1,911 ಕೋಟಿ ಬೆಳೆ ವಿಮೆ ಪರಿಹಾರ ಸಿಕ್ಕಿದೆ. ಈ ಬಾರಿ ಬೆಳೆ ವಿಮೆ ಪ್ರಕ್ರಿಯೆಯಲ್ಲಿ ಹಲವು ಪರಿಷ್ಕರಣೆ ಕೈಗೊಂಡಿದ್ದು ವಿಮೆ ಕಂಪನಿಗಳು ನೋಂದಣಿಯಾದ ಬೆಳೆ ವಿಮೆ ಹಣದ ಶೇ. 20 ಕ್ಕಿಂತ ಹೆಚ್ಚಿನ ಲಾಭಾಂಶವನ್ನು ಇಟ್ಟುಕೊಳ್ಳದಂತೆ ನಿಯಮ ರೂಪಿಸಲಾಗಿದೆ. ಅಧಿಕ ಲಾಭಾಂಶ ಉಳಿಕೆಯಾದಲ್ಲಿ ಸರ್ಕಾರಕ್ಕೆ ಜಮೆಗೊಳಿಸಲು, ರೈತರಿಗೆ ಸಮರ್ಪಕವಾಗಿ ಬೆಳೆ ವಿಮೆ ಪಾವತಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ರಾಜ್ಯದ ಕರಾವಳಿ ಭಾಗದಲ್ಲಿ ರೈತರು ಕೃಷಿಯಲ್ಲಿ ಅತಿ ಕಡಿಮೆ ರಸಗೊಬ್ಬರಗಳನ್ನು ಬಳಸುತ್ತಿದ್ದಾರೆ. ಉಳಿದಂತೆ ಬಹುತೇಕ ಕಡೆ ಅಧಿಕವಾಗಿದೆ. ಅದರಲ್ಲೂ ಬಯಲು ಸೀಮೆ ಜಿಲ್ಲೆಯಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ 4 ಪಟ್ಟು ಅಧಿಕವಾಗಿರುವುದು ಗಮನಕ್ಕೆ ಬಂದಿದೆ. ಈ ಭಾಗದಲ್ಲಿ ಅರಿವು ಕಾರ್ಯಕ್ರಮಗಳನ್ನು ಕೈಗೊಂಡು ರಸಗೊಬ್ಬರ ಬಳಕೆಯನ್ನು ಹಂತ ಹಂತವಾಗಿ ಇಳಿಸಲು ಆದ್ಯತೆ ನೀಡಲಾಗಿದೆ.