ನ್ಯೂಸ್

ಶೋಪಿಯಾನ್‌ ಎನ್‌ಕೌಂಟರ್‌: ಮೂವರು ಲಷ್ಕರ್ ಉಗ್ರರನ್ನು ಸದೆಬಡಿದ ಭಾರತೀಯ ಸೇನೆ | Shopian

Shopian: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್‌ ನಡೆಸಿದ ಪರಿಣಾಮ, ಮೂವರು ಭಯೋತ್ಪಾದಕರು ಸಾವನ್ನಪ್ಪಿದ ಘಟನೆ ಮಂಗಳವಾರ (ಮೇ.13) ನಡೆದಿದೆ.

ಶೋಪಿಯಾನ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಹಾಗೂ ಸಿಆರ್‌ಪಿಎಫ್‌ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಸುಮಾರು ಎರಡು ಗಂಟೆಗಳ ಕಾಲ ಭಯೋತ್ಪಾದಕರ ವಿರುದ್ಧ ಹೋರಾಡಿ, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಮಂಗಳವಾರ ತಿಳಿಸಿದೆ.

ಶೋಪಿಯಾನ್‌ನ ಶೋಕಲ್ ಕೆಲ್ಲರ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಬಂದ ನಂತರ, ಭಾರತೀಯ ಸೇನೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆ ಸಮಯದಲ್ಲಿ ಭಯೋತ್ಪಾದಕರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಎಂದು ಭಾರತೀಯ ಸೇನೆಯು X ನಲ್ಲಿ ಪೋಸ್ಟ್ ಮಾಡಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ನಡೆಸಿದ ಪ್ರತಿದಾಳಿಯಾದ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದೆ ಮತ್ತು ಯಾವುದೇ ಭಯೋತ್ಪಾದಕ ದಾಳಿಯನ್ನು ಈಗ ಯುದ್ಧದ ಕೃತ್ಯವೆಂದು ನೋಡಲಾಗುತ್ತದೆ ಮತ್ತು ಕಠಿಣ ಪ್ರತಿಕ್ರಿಯೆಯನ್ನು ಪಡೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)