ನ್ಯೂಸ್

ಕದ್ದ ಶೂ ಊಟಿ, ಕೊಡೈಕೆನಾಲ್, ಸಂಡೇಬಜಾರ್‌ನಲ್ಲಿ ಸೇಲ್

ಬೆಂಗಳೂರು: ನಗರದೆಲ್ಲೆಡೆ ರಾತ್ರಿ ವೇಳೆ ಪ್ಯಾಸೆಂಜರ್ ಆಟೋದಲ್ಲಿ ಸುತ್ತಾಡಿ ಮನೆಗಳ ಮುಂದೆ ಬಿಟ್ಟ ಬೆಲೆಬಾಳುವ ಶೂ, ಚಪ್ಪಲಿ, ಗ್ಯಾಸ್ ಸಿಲಿಂಡರ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಗುರುಪ್ಪನಪಾಳ್ಯದ ಗಂಗಧರ ಮತ್ತು ಕಲ್ಕೆರೆಯ ಯಲ್ಲಪ್ಪ ಬಂಧಿತ. ಮತ್ತೊಬ್ಬ ಮೋಹನ್ ರಾಜ್ ಮತ್ತು ಇತರರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ. ಆರೋಪಿಗಳಿಂದ 10.72 ಲಕ್ಷ ರೂ. ಮೌಲ್ಯದ 715 ಜೊತೆ ಶೂ, ಗ್ಯಾಸ್ ಸಿಲಿಂಡರ್, ಪ್ಯಾಸೆಂಜರ್ ಆಟೋ ಜಪ್ತಿ ಮಾಡಿರುವುದಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

2017ರಿಂದ ಶೂ, ಗ್ಯಾಸ್ ಸಿಲಿಂಡರ್ ಮತ್ತು ವಾಹನಗಳ ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದರು. ಕದ್ದ ಶೂ, ಚಪ್ಪಲಿಯನ್ನು ಮನೆಯಲ್ಲಿ ಕೆಮಿಕಲ್ ಬಳಸಿ ಚೆನ್ನಾಗಿ ತೊಳೆದು ಹೊಸದಾಗಿ ಪ್ಯಾಕ್ ಮಾಡಿ ಊಟಿ ಮತ್ತು ಕೊಡೈಕೆನಾಲ್‌ನಲ್ಲಿ ಇರುವ ತಮ್ಮ ಸಹಚರರಿಗೆ ಸರಬರಾಜು ಮಾಡುತ್ತಿದ್ದರು. ಇದಲ್ಲದೆ, ಬೆಂಗಳೂರಿನ ಸಂಡೇ ಬಜಾರ್‌ನಲ್ಲೂ ಮಾರಾಟ ಮಾಡುತ್ತಿದ್ದರು. ಶೂ, ಚಪ್ಪಲಿ ಎಂಬ ಕಾರಣಕ್ಕೆ ಮಾಲೀಕರು ಸಹ ಪೊಲೀಸ್ ಠಾಣೆಗೆ ದೂರು ಕೊಡುತ್ತಿರಲಿಲ್ಲ.

ಜು.17ರಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧರಿಸಿ ಬಿಇಎಲ್ ಲೇಔಟ್ 5ನೇ ಬ್ಲಾಕ್‌ನಲ್ಲಿ ಆಟೋದಲ್ಲಿ ಸುತ್ತಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಇಬ್ಬರು ಶೂಗಳನ್ನು ಕಳವು ಮಾಡುತ್ತಿದ್ದರು. ಇವರಿಂದ ಶೂ ಪಡೆದು ಮೋಹನ್ ರಾಜ್, ಊಟಿ ಮತ್ತು ಕೊಡೈಕೆನಾಲ್‌ಗೆ ಸರಬರಾಜು ಮಾಡುತ್ತಿದ್ದ. ಈತ ಸೆರೆಸಿಕ್ಕರೆ ಮತ್ತಷ್ಟು ಪ್ರಕರಣ ಬೆಳಕಿಗೆ ಬರಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.