ಭೋಪಾಲ: ಶಾಜಾಪುರದಲ್ಲಿ ಆಸ್ಪತ್ರೆ ಬಿಲ್ ಪಾವತಿಸದ ಹಿರಿಯ ನಾಗರಿಕರೊಬ್ಬರನ್ನು ಆಸ್ಪತ್ರೆಯ ಬೆಡ್ಗೆ ಕಟ್ಟಿಹಾಕಿದ ಅಮಾನವೀಯ, ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 80 ವರ್ಷದ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಈ ರೀತಿ ನಡೆಸಿಕೊಂಡು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಶಾಜಾಪುರದಲ್ಲಿನ ಸಿಟಿ ಹಾಸ್ಪಿಟಲನಲ್ಲಿ ಹಿರಿಯ ನಾಗರಿಕ ರೋಗಿಯನ್ನು ಈ ರೀತಿ ನಡೆಸಿಕೊಳ್ಳಲಾಗಿದೆ. ಚಿಕಿತ್ಸೆಗೆಂದು ದಾಖಲಾಗಿದ್ದ ಈ ವ್ಯಕ್ತಿ 11,000 ರೂಪಾಯಿ ಪಾವತಿಸಲು ವಿಫಲರಾಗಿದ್ದರು. ಈ ವ್ಯಕ್ತಿಯ ಪುತ್ರಿ 5,000 ರೂಪಾಯಿಯನ್ನು ಆರಂಭದಲ್ಲೇ ಪಾವತಿಸಿದ್ದರು. ಆದರೆ, ಚಿಕಿತ್ಸೆ ನಿಗದಿತ ದಿನ ಮುಗಿಯದ ಕಾರಣ ಬಿಲ್ ಹೆಚ್ಚಾಗಿದೆ. ಅದನ್ನು ಪಾವತಿಸುವುದು ಅವರಿಂದ ಸಾಧ್ಯವಾಗಿರಲಿಲ್ಲ.
ಹೇಗಾದರೂ ಮಾಡಿ ಹಣ ವಸೂಲಿ ಮಾಡಬೇಕೆಂದು ಆ ವೃದ್ಧನನ್ನು ಆಸ್ಪತ್ರೆಯ ಬೆಡ್ಗೆ ಕಟ್ಟಿಹಾಕಿದರು. ಕೈಗಳನ್ನು, ಕಾಲುಗಳನ್ನು ಕಟ್ಟಿಹಾಕಿ ಹಿಂಸೆ ನೀಡಿದ ಫೋಟೋ, ವಿಡಿಯೋಗಳು ಈಗ ವೈರಲ್ ಆಗಿವೆ. ಮಾಧ್ಯಮಗಳಲ್ಲಿ ಇದು ಸುದ್ದಿಯಾಗುತ್ತಲೇ ಆ ಹಿರಿಯ ವ್ಯಕ್ತಿಯನ್ನು ಆಸ್ಪತ್ರೆ ಮಂಡಳಿ ಬಿಡುಗಡೆ ಮಾಡಿದೆ.
ಈ ವಿಚಾರವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ. ವರದಿ ಬಂದ ನಂತರದಲ್ಲಿ ಮುಂದಿನ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಯೂ ತಿಳಿಸಿದ್ದಾರೆ.