ಬೆಂಗಳೂರು: ಜೆಡಿಎಸ್‌ಗೆ ಒಂದರ ಮೇಲೊಂದು ಆಘಾತಗಳು ಎದುರಾಗುತ್ತಿವೆ. ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಆಗಿರುವ ಮುಜುಗರವನ್ನು ಮರೆ ಮಾಚಬೇಕೆನ್ನುವಷ್ಟರಲ್ಲೇ ಸೂರಜ್ ರೇವಣ್ಣ ಪ್ರಕರಣ ಮರ್ಮಾಘಾತ ನೀಡಿದೆ.
ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಅವರ ಪತ್ನಿ ಭವಾನಿ ರೇವಣ್ಣ ಬೇಲ್ ಪಡೆದುಕೊಂಡಿದ್ದರೆ, ಪ್ರಜ್ವಲ್ ಬಂಧನದಲ್ಲಿದ್ದಾನೆ. ಈಗ ಸೂರಜ್ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಹೀಗೆ ಒಂದಾದ ಮೇಲೊಂದರಂತೆ ಪೆಟ್ಟು ಬೀಳುತ್ತಲೇ ಇವೆ. ಇದರಿಂದ ಅಕ್ಷರಶಃ ಜೆಡಿಎಸ್ ಪತರಗುಟ್ಟಿದೆ.
ಇನ್ನೊಂದೆಡೆ ದೇವೇಗೌಡರ ಕುಟುಂಬದಲ್ಲಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಸಂತಸ ಪಡುವ ಸ್ಥಿತಿಯಲ್ಲಿಲ್ಲ. ಕುಟುಂಬದ ಮೇಲೆ ಬರುತ್ತಿರುವ ಆರೋಪಗಳ ಸರಮಾಲೆಗಳಿಂದ ನಾಯಕರು ಕಸಿವಿಸಿಗೆ ಒಳಗಾಗಿದ್ದಾರೆ.
ಪ್ರಜ್ವಲ್ ಪ್ರಕರಣ ದೇಶ, ವಿದೇಶಗಳಲ್ಲಿ ಸದ್ದು ಮಾಡುತ್ತಲೇ ತಕ್ಷಣ ಪಕ್ಷ ಅವರನ್ನು ಅಮಾನತು ಮಾಡಿ ಮುಜುಗರದಿಂದ ಪಾರಾಗುವ ಸಣ್ಣ ಪ್ರಯತ್ನ ಮಾಡಿತ್ತು. ಈಗ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಬೇಕು? ಏನು ಮಾಡಬೇಕು ಎಂದು ದಿಕ್ಕುತೋಚದಂತಾಗಿದೆ.
ಈ ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ಕುಮಾರಸ್ವಾಮಿ ನಿರಾಕರಿಸಿದ್ದಾರೆ. ‘ನನ್ನನ್ನು ಏನು ಕೇಳುತ್ತೀರಿ? ನನಗೇನು ಸಂಬಂಧ?’ ಎಂದು ರೇಗಿದ್ದಾರೆ.
ಇನ್ನೊಂದೆಡೆ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಸೂರಜ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇನ್ನು ರೇವಣ್ಣ ಕುಟುಂಬವನ್ನು ಸಾರಾಸಗಟ ಧಿಕ್ಕರಿಸುವ ಅಥವಾ ಬೆನ್ನಿಗೆ ಬಲವಾಗಿ ನಿಂತು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಒಂದು ವೇಳೆ ಪ್ರಕರಣಗಳನ್ನು ಸಮರ್ಥಿಸಿಕೊಂಡಲ್ಲಿ ಸಾರ್ವಜನಿಕವಾಗಿ ದೊಡ್ಡ ಮಟ್ಟದ ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಈ ವಿಚಾರದಲ್ಲಿ ಎಲ್ಲರೂ ಅಂತರ ಕಾಯ್ದುಕೊಳ್ಳುವ ತಂತ್ರ ಅನುಸರಿಸುತ್ತಿದ್ದಾರೆ.
ರೇವಣ್ಣ ಕುಟುಂಬದಿಂದ ಪಕ್ಷಕ್ಕೆ ದೊಡ್ಡ ಮುಜುಗರ ಆಗಿರುವುದರಿಂದ ಇದರಿಂದ ಪಾರಾಗುವುದು ಹೇಗೆ ಎಂಬ ಚಿಂತೆ ಪಕ್ಷದ ಎಲ್ಲ ನಾಯಕರನ್ನೂ ಕಾಡುತ್ತಿದೆ. ಈ ವಿಚಾರದಲ್ಲಿ ಜೆಡಿಎಸ್ ವರಿಷ್ಠರು ಯಾವ ನಿಲುವು ತಳೆಯುತ್ತಾರೆ ಎಂಬುದು ಕುತೂಹಲಕರವಾಗಿದೆ.