ನ್ಯೂಸ್

ದಯವಿಟ್ಟು ಕೃಪೆಯನ್ನು ತೋರಿ... ಕಣ್ಣೀರಾಕುತ್ತಾ ಟೀಮ್​ ಇಂಡಿಯಾ ಬಳಿ ವಿಶೇಷ ಮನವಿ ಮಾಡಿದ ಅಖ್ತರ್​! Shoaib Akhtar

Shoaib Akhtar : ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಪ್ರಾಬಲ್ಯ ಮೆರೆದಿದೆ. ಭಾನುವಾರ (ಸೆ.14) ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ, ನೀರು ಕುಡಿದಂತೆ ಪಾಕಿಸ್ತಾನವನ್ನು ಮಣಿಸಿತು. ಏಷ್ಯಾಕಪ್ ಬಹಿಷ್ಕರಿಸಿ ಅಥವಾ ಭಾರತ-ಪಾಕ್ ಪಂದ್ಯವನ್ನಾದರೂ ಬಹಿಷ್ಕರಿಸುವಂತೆ ದೇಶಾದ್ಯಂತ ತೀವ್ರ ಒತ್ತಾಯಗಳು ಬಂದರೂ ಐಸಿಸಿ ನಿಯಮಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆಯಿಂದ ಟೀಮ್ ಇಂಡಿಯಾ ಮೈದಾನಕ್ಕೆ ಇಳಿಯಿತು. ಕೇವಲ 15.5 ಓವರ್‌ಗಳಲ್ಲಿ ಪಾಕ್​ ನೀಡಿದ್ದ 128 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತು. ಆದಾಗ್ಯೂ, ಪಂದ್ಯದ ನಂತರ ನಡೆದ ಕೆಲ ಸಂಗತಿಗಳು ಎಲ್ಲರ ಗಮನ ಸೆಳೆದಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಕೂಡ ವೈರಲ್​ ಆಗಿವೆ.

ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್​ ಇಂಡಿಯಾ, ಪಂದ್ಯ ಗೆದ್ದ ಕೂಡಲೇ ನೇರವಾಗಿ ಡ್ರೆಸ್ಸಿಂಗ್ ಕೋಣೆಗೆ ಹೋಯಿತು. ಪಾಕಿಸ್ತಾನಿ ಆಟಗಾರರು ಹ್ಯಾಂಡ್‌ಶೇಕ್‌ಗಾಗಿ ಕ್ರೀಡಾಂಗಣದಲ್ಲಿ ಕಾಯುತ್ತಿದ್ದರು ಕೂಡ ಭಾರತೀಯ ಆಟಗಾರರು ಅವರನ್ನು ನಿರ್ಲಕ್ಷಿಸಿದರು. ಹ್ಯಾಂಡ್​ಶೇಕ್​ ಮಾಡಲೇ ಇಲ್ಲ. ಅದಕ್ಕೆ ಕಾರಣ ಏನೂ ಅನ್ನೋದು ಎಲ್ಲ ಭಾರತೀಯರಿಗೆ ಚೆನ್ನಾಗಿ ಗೊತ್ತಿದೆ. ಹ್ಯಾಂಡ್​ಶೇಕ್​ ಸಿಗದೇ ಪಾಕಿಸ್ತಾನಕ್ಕೆ ಮುಖಭಂಗವಾಯಿತು.

ಇದೀಗ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಈ ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ನನಗೆ ಆಘಾತ ಮತ್ತು ನಿರಾಶೆಯಾಗಿದೆ. ನನಗೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ಭಾರತಕ್ಕೆ ಹ್ಯಾಟ್ಸ್ ಆಫ್ ಆದರೆ, ಕ್ರಿಕೆಟ್ ಪಂದ್ಯವನ್ನು ರಾಜಕೀಯ ಪರಿಭಾಷೆಯಲ್ಲಿ ನೋಡಬೇಡಿ ಎಂದು ಅಖ್ತರ್​ ಹೇಳಿದ್ದಾರೆ.

ನಾವು ನಿಮ್ಮ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳನ್ನು ಆಡಿದ್ದೇವೆ. ಆದರೆ, ಈ ರೀತಿ ಮಾಡಿದ್ದು ಸರಿಯಲ್ಲ. ಹ್ಯಾಂಡ್‌ಶೇಕ್‌ಗಳ ಬಗ್ಗೆ ನಾವು ಬಹಳಷ್ಟು ಹೇಳಬಹುದು. ಎಲ್ಲರ ಮನೆಯಲ್ಲೂ ಜಗಳಗಳು ನಡೆಯುತ್ತವೆ. ಆದ್ದರಿಂದ, ಪಹಲ್ಗಾಮ್ ದಾಳಿಯನ್ನು ಮರೆತು, ಪಾಕಿಸ್ತಾನದೊಂದಿಗೆ ಎಂದಿನಂತೆ ಮುಂದುವರಿಯಿರಿ. ಇದು ಒಂದು ಆಟವಷ್ಟೇ, ಇತರ ತಂಡಗಳ ಆಟಗಾರರೊಂದಿಗೆ ನೀವು ಕೈಜೋಡಿಸಿ, ನಿಮ್ಮ ಕೃಪೆಯನ್ನು ತೋರಿಸಿ ಎಂದು ಮಾಧ್ಯಮ ಸಂವಾದದ ವೇಳೆ ಅಖ್ತರ್​ ಗದ್ಗದಿತರಾದರು.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 127 ರನ್ ಗಳಿಸಿತು. ಪಾಕಿಸ್ತಾನ ಪರ ಸಾಹಿಬ್‌ಜಾದಾ ಫರ್ಹಾನ್ (40) ಮತ್ತು ಶಾಹೀನ್ ಶಾ ಅಫ್ರಿದಿ (ಔಟಾಗದೆ 33) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಭಾರತದ ಪರ ಕುಲದೀಪ್ ಯಾದವ್ ಮೂರು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ಜಸ್​ಪ್ರೀತ್​ ಬುಮ್ರಾ ತಲಾ ಎರಡು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.

ಬಳಿಕ ಭಾರತ ತಂಡ 128 ರನ್​ಗಳ ಸಾಧಾರಣ ಗುರಿಯನ್ನು 15.5 ಓವರ್​ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ತಲುಪಿತು. ಭಾರತದ ಪರ ನಾಯಕ ಸೂರ್ಯಕುಮಾರ್ ಯಾದವ್ (ಔಟಾಗದೆ 47), ಅಭಿಷೇಕ್ ಶರ್ಮ (31) ಮತ್ತು ತಿಲಕ್ ವರ್ಮಾ (31) ಉಪಯುಕ್ತ ರನ್​ ಕಾಣಿಕೆ ನೀಡಿದರು. ಪಾಕಿಸ್ತಾನ ಪರ ಸೈಮ್ ಅಯೂಬ್ ಮೂರು ವಿಕೆಟ್ ಪಡೆದರು. ಉಳಿದಂತೆ ಯಾವೊಬ್ಬರ ಬೌಲರ್​ ಕೂಡ ಖಾತೆ ತೆರೆಯಲಿಲ್ಲ. ಈ ಮೂಲಕ ಹೈವೋಲ್ಟೇಜ್​ ಪಂದ್ಯದಲ್ಲಿ ಭಾರತದ ಎದುರು ಪಾಕ್​ ಸುಲಭ ತುತ್ತಾಯಿತು. ಅಂದಹಾಗೆ, ಈ ಗೆಲುವನ್ನು ಟೀಮ್​ ಇಂಡಿಯಾ ನಾಯಕ ಸೂರ್ಯಕುಮಾರ್​ ಯಾದವ್​ ಭಾರತೀಯ ಸೇನೆಗೆ ಅರ್ಪಿಸಿದ್ದಾರೆ. ಇತ್ತೀಚೆಗೆ ಭಾರತೀಯ ಸೇನೆ ಪಹಲ್ಗಾಮ್​ ದಾಳಿಗೆ ಆಪರೇಷನ್​​ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಈ ಪಂದ್ಯ ಭಾರೀ ಕುತೂಹಲ ಹುಟ್ಟುಹಾಕಿತ್ತು. ಅಂತಿಮವಾಗಿ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. ಯುದ್ಧ ಭೂಮಿಯಲ್ಲಿ ಮುಖಭಂಗ ಅನುಭವಿಸಿದ್ದ ಪಾಕಿಸ್ತಾನ ಇದೀಗ ಮೈದಾನದಲ್ಲೂ ಅವಮಾನ ಎದುರಿಸಿದೆ. (ಏಜೆನ್ಸೀಸ್​)