ಆಲೂರು : ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ ದಿವಂಗತ ಕೆ. ಶಿವರಾಂ ಅವರು ಸದಾ ಜನರ ಸೇವೆಯಲ್ಲಿ ತೊಡಗಿದ್ದವರು. ಅಧಿಕಾರಿಯಾಗಿ ಹಲವು ಬಡವರಿಗೆ ನೆರವಾಗುವ ಮೂಲಕ ಮಾದರಿಯಾಗಿದ್ದಾರೆ ಎಂದು ಶಾಸಕ ಸಿಮೆಂಟ್ ಮಂಜು ಬಣ್ಣಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಹಾಸಭಾ ಆಲೂರು ತಾಲೂಕು ಸಮಿತಿ ವತಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಛಲವಾದಿ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಕೆ.ಶಿವರಾಂ ಅವರ ಸ್ಮರಣಾರ್ಥ 2ನೇ ವರ್ಷದ ಕರೋಕೆ ಗೀತಾ ಗಾಯನ ಸ್ವರ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಛಲವಾದಿ ಸಮಾಜಕ್ಕೆ ಆರ್ಥಿಕ ಸಬಲತೆ ತರಲು ಶ್ರಮಿಸಿರುವುದಲ್ಲದೆ, ಗೊಲ್ಲರಹಟ್ಟಿಯಲ್ಲಿ ನಡೆಯುತ್ತಿದ್ದ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಪಣ ತೊಟ್ಟಿದ್ದರು. ದಲಿತರು, ಪೌರಕಾರ್ಮಿಕರು ಮತ್ತು ಹಿಂದುಳಿದವರ ಏಳಿಗೆಗೆ ಶಕ್ತಿ ಮೀರಿ ಶ್ರಮಿಸಿ ತಮ್ಮದೇ ಆದ ಚಾಪು ಮೂಡಿಸಿ ಅದೆಷ್ಟೋ ಕುಟುಂಬಗಳಿಗೆ ಬೆಳಕನ್ನು ನೀಡಿ ಅಭಿಮಾನಿಗಳ ಪಡೆಯನ್ನೇ ಹುಟ್ಟು ಹಾಕಿದ್ದರು ಎಂದರು.
ಸಂಸದ ಶ್ರೇಯಸ್ ಎಂ.ಪಟೇಲ್ ಮಾತನಾಡಿ, ಗಣರಾಜ್ಯೋತ್ಸವ ಹಾಗೂ ಕೆ.ಶಿವರಾಂ ನೆನಪಾರ್ಥಕವಾಗಿ ಕರೋಕೆ ಗೀತಾ ಗಾಯನ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಂದ ಸ್ಥಳೀಯ ಕಲಾವಿದರ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ತಿಳಿಸಿದರು.
ರಾಜ್ಯ ಛಲವಾದಿ ಮಹಾಸಭಾದ ಅಧ್ಯಕ್ಷೆ ವಾಣಿ ಕೆ.ಶಿವರಾಮ್ ಅವರನ್ನು ಸನ್ಮಾನಿಸಲಾಯಿತು. ದಲಿತ ಸಮುದಾಯದ ಏಳಿಗೆಗಾಗಿ ತುಂಬ ಶ್ರಮಪಟ್ಟ ಧೀಮಂತ ವ್ಯಕ್ತಿ ಶಿವರಾಂ. ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲೇ ಬಂದವರು. ತನ್ನ ಸಮುದಾಯಕೋಸ್ಕರ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟವರು. ಆದರೆ ಅವರ ಅಕಾಲಿಕ ಮರಣದಿಂದ ನನಗೆ ಹಾಗೂ ನಮ್ಮ ಛಲವಾದಿ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಗಾಯಕರು ಹಾಗೂ ಕಲರ್ಸ್ ಕನ್ನಡ ವಾಹಿನಿಯ ಕಂಠದಾನ ಕಾಲವಿದ ಮನೋಜ್ ಶರ್ಮ, ಗಾಯಕಿ ಹಾಗೂ ಹಾಸನ ಲೈಮ್ ಲೈಟ್ ಪ್ರಶಸ್ತಿ ಪುರಸ್ಕೃತರಾದ ವಾಣಿ ನಾಗೇಂದ್ರ, ಸರಿಗಮಪ ಖ್ಯಾತಿಯ ಗಾಯಕ ಬಸವರಾಜು ಬಡಗೆರ ಭಾಗವಹಿಸಿದ್ದರು. ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರಾದ ಮುರುಳಿ ಮೋಹನ್, ಶಾಂತ ಕೃಷ್ಣ, ಛಲವಾದಿ ರಾಜ್ಯ ಉಪಾಧ್ಯಕ್ಷ ಬಸವರಾಜು ಖಜಾಂಚಿ ಮೈಕೋ ನಾಗರಾಜು, ನಿರ್ದೇಶಕರಾದ ಕೃಷ್ಣಪ್ಪ, ಸಿದ್ದರಾಜು, ಮಹದೇವ್, ನಾಗೇಶ್ ಶಿವಪ್ಪ, ಜವರಯ್ಯ, ಶಿವಣ್ಣ, ಸಂಘಟನೆ ಕಾರ್ಯದರ್ಶಿಗಳಾದ ವಸಂತ, ರಾಜಪ್ಪ, ಪರಶ್ ರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜ್ಜೇನಳ್ಳಿ ಲೋಕೇಶ್, ತಾಲೂಕು ಗೌರವಾಧ್ಯಕ್ಷ ಎ.ಟಿ. ಮಲ್ಲೇಶ್, ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.