ನಟ ಶಿವರಾಜಕುಮಾರ್ 63ರ ಹರೆಯದರಲ್ಲೂ ಕನ್ನಡ ಚಿತ್ರರಂಗದ ಅತ್ಯಂತ ಬಿಜಿ ನಟ. ಈಗಾಗಲೇ ಅವರು ನಟಿಸಿರುವ ಪ್ಯಾನ್ ಇಂಡಿಯಾ "ಪೆದ್ದಿ' ಬಿಡುಗಡೆಯಾಗಿದ್ದು, ಅದರ ಜತೆಗೆ "ಬೇಲ್', "ಜೈಲರ್ 2', "666 ಆಪರೇಷನ್ ಡ್ರೀಮ್ ಥಿಯೇಟರ್', "ಡ್ಯಾಡ್', "ಎ ಫಾರ್ ಆನಂದ್', "ಗುಮ್ಮಡಿ ನರಸಯ್ಯ', "ಉತ್ತರಕಾಂಡ' ಸೇರಿ ಇನ್ನೂ ಕೆಲ ಚಿತ್ರಗಳು ವಿವಿಧ ಹಂತದಲ್ಲಿವೆ. ಇನ್ನು ಉಳಿದ ಆರು ತಿಂಗಳಲ್ಲಿ ಅವರು ನಟಿಸಿರುವ ಮೂರು ಚಿತ್ರಗಳು ತೆರೆಗೆ ಬರುವ ನಿರೀಕ್ಷೆಯಿದೆ. ಇದೆಲ್ಲದರ ನಡುವೆಯೇ ಶಿವರಾಜಕುಮಾರ್ ಪಿ.ಸಿ. ಶೇಖರ್ ನಿರ್ದೇಶಿಸುತ್ತಿರುವ, ವಿಜಯ್ ರಾಘವೇಂದ್ರ ನಾಯಕನಾಗಿರುವ "ಮಹಾನ್' ಚಿತ್ರದಲ್ಲೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ವಕೀಲನ ಪಾತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೆ ಅವರ ಲುಕ್ ರಿವೀಲ್ ಮಾಡಲಾಗಿದೆ. ನಿರ್ದೇಶಕ ಶೇಖರ್, ""ಮಹಾನ್' ರೈತರ ಕುರಿತ ಕಥಾಹಂದರ ಹೊಂದಿರುವ ಚಿತ್ರ. ಇದರಲ್ಲಿ ಬರುವ ಪ್ರತಿ ಪಾತ್ರಕ್ಕೂ ಪ್ರಾಮುಖ್ಯವಿದೆ. ಮನೆಯಲ್ಲಿ ನಾವೇನಾದರೂ ತಪ್ಪು ಮಾಡಿದರೆ ನಮಗೆ ತಂದೆ-ತಾಯಿ ಬುದ್ಧಿ ಹೇಳುತ್ತಾರೆ. ಅದೇ ರೀತಿಯ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾದಾಗ, ಅಲ್ಲಿನ ತೊಂದರೆಗಳನ್ನು ತಿದ್ದಲು ಮಹಾನ್ ವ್ಯಕ್ತಿಯ ಅಗತ್ಯವಿರುತ್ತದೆ. ಅಂತಹ ಪಾತ್ರದಲ್ಲಿ ಡಾ. ಶಿವರಾಜಕುಮಾರ್ ಅಭಿನಯಿಸಿದ್ದಾರೆ. ಶಿವಣ್ಣರಿಗೆ ಆ್ಯಕ್ಷನ್-ಕಟ್ ಹೇಳುವ ನನ್ನ ಬಹುದಿನಗಳ ಆಸೆ ಈ ಚಿತ್ರದ ಮೂಲಕ ನೆರವೇರಿದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ. ವಿಜಯ್ ರಾಘವೇಂದ್ರ, ಶಿವರಾಜಕುಮಾರ್ ಜತೆ ದೇವರಾಜ್, ರಾಧಿಕಾ ನಾರಾಯಣ್, ನಮ್ರತಾ ಗೌಡ, ವರ್ಷ ಬೊಳ್ಳಮ್ಮ, ಕಿರಣ್ ಶ್ರೀನಿವಾಸ್, ಮಿತ್ರ, ರಮೇಶ್ ಇಂದಿರ, ರಮೇಶ್ ಭಟ್, ಶರತ್ ಲೋಹಿತಾಶ್ವ, ಅವಿನಾಶ್, ರಂಗಾಯಣ ರು ತಾರಾಗಣದಲ್ಲಿದ್ದಾರೆ.
ಮಾಸ್ ಲೀಡರ್ ಜತೆ ಚಿನ್ನಾರಿ ಮುತ್ತ
ಈ ಹಿಂದೆಯೇ ದೊಡ್ಮನೆ ಕುಡಿಗಳಾದ ಶಿವರಾಜಕುಮಾರ್ ಮತ್ತು ವಿಜಯ್ ರಾಘವೇಂದ್ರ ಕೆಲ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಶಿವಣ್ಣ ನಾಯಕನಾಗಿದ್ದ "ಅರಳಿದ ಹೂವುಗಳು' (1991), "ಜಗಮೆಚ್ಚಿದ ಹುಡುಗ' (1993) ಚಿತ್ರಗಳಲ್ಲಿ ವಿಜಯ್ ಬಾಲನಟನಾಗಿ ಕಾಣಿಸಿಕೊಂಡಿದ್ದರು. ನಂತರ "ರಿಷಿ' (2005) ಚಿತ್ರದಲ್ಲಿ ಇಬ್ಬರೂ ಅಣ್ಣ-ತಮ್ಮಂದಿರಾಗಿ ಮಿಂಚಿದ್ದರು. ನಂತರ ಶಿವಣ್ಣ ನಾಯಕನಾಗಿದ್ದ "ಭಜರಂಗಿ' (2013) ಚಿತ್ರದ "ಬಾಸು ನಮ್ ಬಾಸು' ಹಾಡಿನಲ್ಲಿ ವಿಜಯ್ ರಾವೇಂದ್ರ ಕೂಡ ಕಾಣಿಸಿಕೊಂಡಿದ್ದರು. "ಮಾಸ್ ಲೀಡರ್' ಮತ್ತು "ಶ್ರೀಕಂಠ' (2017) ಚಿತ್ರಗಳಲ್ಲೂ ಶಿವಣ್ಣ ಜತೆ ಮುಖ್ಯ ಭೂಮಿಕೆಯಲ್ಲಿ ವಿಜಯ್ ರಾಘವೇಂದ್ರ ತೆರೆ ಹಂಚಿಕೊಂಡಿದ್ದರು. ಇದೀಗ ಒಂಭತ್ತು ವರ್ಷಗಳ ನಂತರ "ಮಹಾನ್' ಮೂಲಕ ದೊಡ್ಮನೆ ಕುಡಿಗಳು ಮತ್ತೆ ಒಂದಾಗಿರುವುದು ನಿರೀೆ ಹೆಚ್ಚಿಸಿದೆ.
ಕೋಟ್:
ರೈತಜೀವನವೇ ಶ್ರೇಷ್ಠ ಜೀವನ, ಸೈನಿಕರಷ್ಟೇ ರೈತರೂ ಮುಖ್ಯ, ರೈತರನ್ನೂ ಗುರುತಿಸಬೇಕು, ಅವರಿಗೂ ಪ್ರಾಮುಖ್ಯ ನೀಡಬೇಕು ಎಂದು ಹೇಳುವ ಚಿತ್ರವಿದು. ಸಾಕಷ್ಟು ಓದಿ, ರೀಸರ್ಚ್ ಮಾಡಿ ಹಲವು ನೈಜ ಟನೆಗಳು, ವ್ಯಕ್ತಿಗಳಿಂದ ಸ್ಫೂರ್ತಿ ಪಡೆದಿರುವ ಕಥೆ. ನನ್ನ ಹಿಂದಿನ "ರಾಗಾ' ಚಿತ್ರದಂತೆಯೇ "ಮಹಾನ್' ಕೂಡ ಒಂದು ಪೇಂಟಿಂಗ್ನಂತೆ ಮೂಡಿಬಂದಿದೆ. ಕಮರ್ಷಿಯಲ್ ಅಂಶಗಳೊಂದಿಗೆ ಹಳ್ಳಿಯ ಸೊಬಗನ್ನು ವೈಭವೀಕರಿಸಿದ್ದೇನೆ. ದೃಶ್ಯವೈಭವವಿದೆ. - ಪಿ.ಸಿ.ಶೇಖರ್, ನಿರ್ದೇಶಕ