ನ್ಯೂಸ್

ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್; ವೀಳ್ಯದೆಲೆ, ಚಕ್ಕುಲಿ ಇಟ್ಟು ಪ್ರಾರ್ಥಿಸಿದ ಹ್ಯಾಟ್ರಿಕ್ ಹೀರೋ

ಮಂಗಳೂರು: ನಟ ಶಿವರಾಜ್​ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಜತೆಗೆ ಕುತ್ತಾರಿನಲ್ಲಿರುವ ಕೊರಗಜ್ಜನ ಆದಿಸ್ಥಳ ಭೇಟಿ ನೀಡಿದ್ದಾರೆ. ಕುಟುಂಬ ಸಮೇತ ಆಗಮಿಸಿದ ಶಿವರಾಜ್ ಕುಮಾರ್, ಕೊರಗಜ್ಜನಿಗೆ ವೀಳ್ಯದೆಲೆ, ಚಕ್ಕುಲಿ ಇಟ್ಟು ಪ್ರಾರ್ಥಿಸಿದ್ದಾರೆ. ಈ ವೇಳೆ ವೇದ ಚಿತ್ರತಂಡ ಶಿವಣ್ಣನಿಗೆ ಸಾಥ್ ನೀಡಿದೆ.

ಕೊರಗಜ್ಜನ ‌ಕ್ಷೇತ್ರದ ಬಗ್ಗೆ ನನಗೆ ರಕ್ಷಿತಾ ಅನೇಕ ಬಾರಿ ಹೇಳಿದ್ದರು. ಅಣ್ಣ, ಕೊರಗಜ್ಜನ ಬಳಿಗೆ ಹೋಗಿ ಬನ್ನಿ ಅಂತ ಹೇಳುತ್ತಿದ್ದರು. ಇಲ್ಲಿ ಮನುಷ್ಯನ ಸಮಸ್ಯೆಗಳನ್ನು ಬಹಳ ಸರಳವಾಗಿ ಹೇಳುವ ರೀತಿಯಿದೆ. ಯಾವುದೇ ಆಡಂಬರವಿಲ್ಲದೆ ಜನರು ಪ್ರಾರ್ಥನೆ ಮಾಡಲು ಅವಕಾಶವಿದೆ. ಮಂಗಳೂರು, ಉಡುಪಿ ಭಾಗದಲ್ಲಿ ವೇದ ಸಿನಿಮಾ ಚಿತ್ರೀಕರಣ ಆಗಿದೆ. ಇವತ್ತು ಕೊರಗಜ್ಜನ ಕ್ಷೇತ್ರಕ್ಕೆ ಬಂದು ಬೇಡಿಕೆ ಸಲ್ಲಿಸಿದ್ದೇವೆ. ಮನಸ್ಸಿಗೆ ‌ನೆಮ್ಮದಿ ಇದೆ. ಪ್ರಾರ್ಥನೆ ಮಾಡಿದ್ದು ನೆರವೇರುತ್ತದೆ ಎಂಬ ನಂಬಿಕೆ ಇದೆ. ಆಗುವುದು ಬಿಡುವುದು ದೈವದ ಇಚ್ಛೆ. ಆದರೆ ಪ್ರಾರ್ಥನೆ ಮಾಡಬೇಕು ಎಂದು ಹೇಳಿದರು.

ವೇದ ಸಿನಿಮಾದ ಪ್ರಮೋಷನ್​ಗಾಗಿ ಮಂಗಳೂರಿಗೆ ಆಗಮಿಸಿರುವ ಶಿವಣ್ಣ, ಬಿಡುವು ಮಾಡಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆಯುತ್ತಿದ್ದಾರೆ. ನಿನ್ನೆ (ಡಿ.09) ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಶಿವರಾಜ್ ಕುಮಾರ್ ಭೇಟಿ ನೀಡಿದ್ದರು.