ಸಾಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಕೌಂಡಿನ್ಯ ಕೊಡ್ಲುತೋಟ ಅವರ ನನ್ನ ಪಕ್ಕದ ಸೀಟು ಕೃತಿಯನ್ನು ಗಜಾನನ ಶರ್ಮ ಹುಕ್ಲ ಬಿಡುಗಡೆಗೊಳಿಸಿದರು. ಡಾ. ಸರ್ಫ್ರಾಜ್ ಚಂದ್ರಗುತ್ತಿ, ಪ್ರಶಾಂತ್ ಮಧ್ಯಸ್ಥ ಇತರರಿದ್ದರು. 
ನ್ಯೂಸ್

ಸಾಧನೆಯ ಹಾದಿಯಲ್ಲಿ ಯುವಜನತೆ

ಸಾಗರ: ಯುವ ಸಾಹಿತಿಗಳು ಪ್ರತಿಭಾವಂತರಿದ್ದಾರೆ. ಹೊಸ ಲೇಖಕರ ಆಶೋತ್ತರ, ಆಲೋಚನೆಗಳಿಗೆ ಹಿರಿಯರು ಸ್ಪಂದಿಸಬೇಕು ಎಂದು ಕಾದಂಬರಿಕಾರ ಗಜಾನನ ಶರ್ಮ ಹುಕ್ಲ ಅಭಿಪ್ರಾಯಪಟ್ಟರು.

ಶ್ರೀನಗರ ಬಡಾವಣೆಯ ನೃತ್ಯಭಾಸ್ಕರ ಸಭಾಂಗಣದಲ್ಲಿ ಬನಜಾಲಯ ಬಳಗದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯುವ ಬರಹಗಾರ ಕೌಂಡಿನ್ಯ ಕೊಡ್ಲುತೋಟ ಅವರ ಮೊದಲ ಕಥಾ ಸಂಕಲನ ನನ್ನ ಪಕ್ಕದ ಸೀಟು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಜೀವನದ ತಾತ್ವಿಕ ಅರ್ಥ ಮನದಟ್ಟು ಮಾಡಿಸುವ ಕೃತಿ ಇದಾಗಿದೆ. ಲೇಖಕರು ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಓದುಗರಿಗೆ ಇಷ್ಟವಾಗಬಲ್ಲ ಕಥಾನಕವನ್ನು ಕೃತಿ ಹೊಂದಿದೆ. ಯುವಜನರು ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯತ್ತ ಸಾಗುತ್ತಿದ್ದಾರೆ ಎಂದು ತಿಳಿಸಿದರು.

ಉಪನ್ಯಾಸಕ ಡಾ. ಸರ್ಫ್ರಾಜ್ ಚಂದ್ರಗುತ್ತಿ ಮಾತನಾಡಿ, ಕಥೆಯು ಅನಿರೀಕ್ಷಿತ ತಿರುವು, ಅಂತ್ಯ ಅಪರೂಪದ್ದಾಗಿ ಕಥೆ ಗಮನ ಸೆಳೆಯಬೇಕು. ಅಂತಹ ವಿಶೇಷ ಅಂಶಗಳು ಕೌಂಡಿನ್ಯ ಅವರ ಕಥೆಗಳಲ್ಲಿವೆ. ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರಯೋಗ ಮತ್ತು ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಅಷ್ಠಾವಧಾನಿ ಪ್ರಶಾಂತ್ ಮಧ್ಯಸ್ಥ, ಬೆಂಗಳೂರಿನ ಚಿನ್ಮಯ ಪ್ರಕಾಶನದ ನವೀನ್ ಪುರುಷೋತ್ತಮ್, ಪತ್ರಕರ್ತ ಮಾ.ವೆಂ.ಸ.ಪ್ರಸಾದ್, ಕಥೆಗಾರ ಕೌಂಡಿನ್ಯ ಕೊಡ್ಲುತೋಟ, ಉಮೇಶ ಕೊಡ್ಲುತೋಟ, ರಮೇಶ್, ಬಿ.ಟಿ.ಅರುಣ್ ಇತರರಿದ್ದರು. ಸಂವತ್ಸರ, ಶ್ರೀರಂಜನಿ, ಶ್ರೀಧರ ಶಾನಭಾಗ್ ಅವರಿಂದ ಗಾಯನ ನಡೆಯಿತು. ನಿಖಿಲ್ ಕುಂಸಿ ತಬಲಾ ಸಾಥ್ ನೀಡಿದರು.