ವಿಶ್ವ ಮಾನಸಿಕ ದಿನಾಚರಣೆ ಅಂಗವಾಗಿ ತೀರ್ಥಹಳ್ಳಿ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಹಿರಿಯ ಮಾನಸಿಕ ತಜ್ಞ ಡಾ. ಯು.ಅರುಣಾಚಲ ಅವರನ್ನು ಗೌರವಿಸಲಾಯಿತು. ಡಾ. ಶಿವರಾಂ, ಡಾ. ಆರತಿ ಜಗನ್ನಾಥನ್ ಇತರರಿದ್ದರು.  
ನ್ಯೂಸ್

ವ್ಯಸನಿಗಳಲ್ಲಿ ಯುವಜನರೇ ಹೆಚ್ಚು

ತೀರ್ಥಹಳ್ಳಿ: ಮಾನಸಿಕ ರೋಗ ಹೆಚ್ಚುತ್ತಿರುವುದಕ್ಕೆ ವ್ಯಸನವೂ ಮುಖ್ಯ ಕಾರಣ. ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಎಂದು ಮನೋರೋಗ ತಜ್ಞ ಡಾ. ಯು.ಅರುಣಾಚಲ ಹೇಳಿದರು.

ವಿಶ್ವ ಮಾನಸಿಕ ದಿನಾಚರಣೆ ಅಂಗವಾಗಿ ಪಟ್ಟಣದ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಸನಗಳ ದುಷ್ಪರಿಣಾಮದ ಬಗ್ಗೆ ಮಕ್ಕಳಿಗೆ ಬಾಲ್ಯದಲ್ಲೇ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಮಾನಸಿಕ ರೋಗಿಗಳ ಮೇಲಿನ ಕಾಳಜಿಯಿಂದ ತಾಲೂಕಿನಲ್ಲಿ ನಿಮ್ಹಾನ್ಸ್ ಸಂಸ್ಥೆ ವೈದ್ಯರ ಶ್ರಮದ ಫಲವಾಗಿ ನಡೆದಿರುವ ಸರ್ವೇ, ಸಂಶೋಧನೆ, ಆರೈಕೆ ಆರಂಭವಾದ ನಂತರದಲ್ಲಿ ರೋಗಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಮನಸ್ಸಿನ ಮೇಲಿನ ಹಿಡಿತ ಮತ್ತು ಅಸೆಗೆ ನಿಯಂತ್ರಣ ಕೂಡ ಅಗತ್ಯ ಎಂದರು.

ನಿಮ್ಹಾನ್ಸ್ ಸಂಸ್ಥೆಯ ಇಂಟಿಗ್ರೇಟಿವ್ ಔಷಧ ವಿಭಾಗದ ಮುಖ್ಯಸ್ಥ ಡಾ. ಶಿವರಾಂ ವಾರಂಬಳ್ಳಿ ಮಾತನಾಡಿ, ಔಷಧಗಳಿಂದ ಆಗುವ ಅಡ್ಡ ಪರಿಣಾಮ ನಿಯಂತ್ರಿಸಲು ಯೋಗಾಭ್ಯಾಸ ಕಡ್ಡಾಯಗೊಳಿಸುವುದು ಸೂಕ್ತ. ಯೋಗ ಆಯುರ್ವೇದವನ್ನು ಆರಂಭದಲ್ಲೇ ಬಳಸುವುದರಿಂದ ಔಷಧದಿಂದಾಗುವ ಹಾನಿ ತಡೆಯಬಹುದು. ಚಿಕ್ಕ ಸಮಸ್ಯೆಗಳಿಗೆ ಆಯುರ್ವೇದ ಉತ್ತಮ ಎಂದು ತಿಳಿಸಿದರು.

ಸಿಮ್ಸ್ ಮನೋವೈದ್ಯ ಶಾಸ್ತ್ರ ವಿಭಾಗದ ಕೆ.ಸುರೇಶ್ ಮಾತನಾಡಿ, 20 ವರ್ಷಗಳಿಂದ ತೀರ್ಥಹಳ್ಳಿ ತಾಲೂಕಿನಲ್ಲಿ 5000ಕ್ಕೂ ಹೆಚ್ಚಿನ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ 495 ಮಂದಿ ತೀವ್ರ ತರ ರೋಗಿಗಳಾಗಿದ್ದು, ಅವರಿಗೆ ಚಿಕಿತ್ಸೆಯೊಂದಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದರು.

ಮನೋವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನವೀನ್‌ಕುಮಾರ್, ನಿಮ್ಹಾನ್ಸ್ ಸಂಸ್ಥೆಯ ಯಸ್ ಯೋಜನೆ ಪ್ರಧಾನ ಸಂಶೋಧಕಿ ಡಾ. ಆರತಿ ಜಗನ್ನಾಥನ್, ಸಿಮ್ಸ್ ಮನೋಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ.ಎಸ್.ರಾಮಪ್ರಸಾದ್ ಇತರರಿದ್ದರು.