ಸಾಗರ: ಯೋಧರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಯುವ ಮೋರ್ಚಾ ನಗರ ಅಧ್ಯಕ್ಷ ಪರಶುರಾಮ್ ಹೇಳಿದರು.
ಸಾಗರ ಹೋಟೆಲ್ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ, ವಿಶ್ವ ಹಿಂದು ಪರಿಷತ್, ಬಜರಂಗದಳದಿಂದ ಪುಲ್ವಾಮ ದಾಳಿಯಲ್ಲಿ ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, 2019 ಫೆ.14ರಂದು ಯೋಧರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 29ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು. ಹುತಾತ್ಮ ಯೋಧರ ಸಾವಿನ ನಂತರ ಸರ್ಜಿಕಲ್ ಸ್ಟ್ರೈಕ್ ಮೂಲಕ ಭಯೋತ್ಪಾದಕರ ನೆಲೆ ಧ್ವಂಸ ಮಾಡಲಾಯಿತು. ದೇಶದಲ್ಲಿ ಸಾಕಷ್ಟು ಭಯೋತ್ಪಾದಕರನ್ನು ಮಟ್ಟಹಾಕಲಾಗಿದೆ. ಯೋಧರಿಗೆ ಹೆಚ್ಚು ಸ್ವಾತಂತ್ರೃ ನೀಡಲಾಗಿದೆ ಎಂದು ತಿಳಿಸಿದರು.
ಬಜರಂಗದಳ ಜಿಲ್ಲಾ ಸಂಚಾಲಕ ಸಂತೋಷ್ ಶಿವಾಜಿ ಮಾತನಾಡಿ, ಫೆ.14 ಅತ್ಯಂತ ಕರಾಳ ದಿನ. ವೀರ ಯೋಧರನ್ನು ಕಳೆದುಕೊಂಡಿದ್ದು, ಯೋಧರ ಮೇಲೆ ಇಂತಹ ಘಟನೆ ನಡೆಯದಂತೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಸೈನಿಕರಿಗೆ ಆಧುನಿಕ ಶಸ್ತ್ರಾಸ್ತ್ರ ನೀಡುವ ಮೂಲಕ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗಿದೆ ಎಂದರು. ಸುನೀಲ್ ರುದ್ರಪ್ಪ, ವಿನೋದ್ ರಾಜ್, ವಿ.ಮಹೇಶ, ಕೆ.ಎಸ್.ಪ್ರಶಾಂತ್ ಇತರರಿದ್ದರು.