ಭದ್ರಾವತಿಯ ಶ್ರೀ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಮಾಜದ ಹಿರಿಯರಿಗೆ ಗೌರವ ಕಾರ್ಯಕ್ರಮವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು. ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ. ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಎಡೆಯೂರು ಶ್ರಿಗಳು, ಶಾಸಕ ಬಿ.ಕೆ.ಸಂಗಮೇಶ್ವರ್ ಇತರರಿದ್ದರು.  
ನ್ಯೂಸ್

ವೀರಶೈವ ಲಿಂಗಾಯತ ಧರ್ಮದ ತತ್ವ ಸಿದ್ಧಾಂತ ಪಾಲಿಸಿ

ಭದ್ರಾವತಿ: ವೀರಶೈವ ಲಿಂಗಾಯತ ಧರ್ಮದ ತತ್ವ, ಆದರ್ಶ ಮತ್ತು ಸಿದ್ಧಾಂತಗಳು ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಬೇಕೆ ಹೊರತು ಕೇವಲ ವೇದಿಕೆ ಭಾಷಣಗಳಿಗೆ ಸೀಮಿತವಾಗಬಾರದು. ಇಂತಹ ಸೈದ್ಧಾಂತಿಕ ನೆಲೆಗಟ್ಟಿನ ಆಧಾರದ ಮೇಲೆ ಮಹಾಸಭಾ ಕಾರ್ಯಕ್ಕೆ ಪೀಠಾಚಾರ್ಯರು ಹಾಗೂ ಶಿವಾಚಾರ್ಯರು ಸದಾ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ. ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಸಿದ್ಧಾರೂಡ ನಗರದಲ್ಲಿರುವ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಸಮಾಜದ ಹಿರಿಯರಿಗೆ ಗೌರವ ಮತು ್ತಜನಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಮಾಜದಲ್ಲಿ ನೂರಾರು ಒಳಪಂಗಡಗಳು ಇದ್ದರೂ ಅದರ ಧರ್ಮದ ಮೂಲ ವೀರಶೈವ ಲಿಂಗಾಯತ ಎಂಬುದನ್ನು ಯಾರೂ ಮರೆಯಬಾರದು. ನಾವು ಒಂದಾಗಿದ್ದಾಗ ನಮ್ಮ ಶಕ್ತಿಯನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ಆದರೆ 10 ವರ್ಷಗಳಲ್ಲಿ ಜಾತಿ ಮಠಗಳು ಜನಿಸಿ ಸಮಾಜವನ್ನು ಕಲುಷಿತಗೊಳಿಸಿವೆ. ಇದು ಜನಮಾನಸದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ಕೆ.ಸಂಗಮೇಶ್ವರ, ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ದಾವಣಗೆರೆ ಅಣಬೇರು ರಾಜಣ್ಣ, ಎಚ್.ಎಂ.ರೇಣುಕ ಪ್ರಸಾದ್, ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜ್‌ಕುಮಾರ್, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ ಅವರಿಗೆ ಸನ್ಮಾನಿಸಲಾಯಿತು.

ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಿದರು. ತಾಲೂಕು ಅಧ್ಯಕ್ಷ ಕೆ.ಎಸ್.ವಿಜಯ್‌ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರಹಳ್ಳಿ, ರಾಜ್ಯ ಕಾರ್ಯದರ್ಶಿ ಎಂ.ಜಿ.ಶಶಿಕಲಾಮೂರ್ತಿ, ರಾಜ್ಯ ಕೋಶಾಧ್ಯಕ್ಷ ಡಿ.ವಿ.ಗಿರೀಶ್ ಕುಮಾರ್, ರಾಜ್ಯ ನಿರ್ದೇಶಕರಾದ ಶಿಕಾರಿಪುರದ ಎನ್.ವಿ.ಈರೇಶ್, ಜಿಲ್ಲಾಧ್ಯಕ್ಷ ರುದ್ರಮುನಿ ಎನ್.ಸಜ್ಜನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳೇಕೆರೆ ಸಂತೋಷ್, ಶ್ರೀ ಬಸವೇಶ್ವರ ಧರ್ಮ ಸಂಸ್ಥೆಯ ಶಿವಕುಮಾರ್ ಉಪಸ್ಥಿತರಿದ್ದರು.

ಜಾತಿಗಣತಿ ನಿರ್ಲಕ್ಷೃ ಸಲ್ಲ: ಇಂದಿನ ಜಾತಿಗಣತಿ ನಿರ್ಲಕ್ಷಿಸಿದರೆ ಮುಂದೆ ಸಮಾಜದ ಮೇಲಾಗುವ ದುಷ್ಪರಿಣಾಮ ಸಹ ಚಿಂತಿಸಬೇಕಾಗುತ್ತದೆ. ರಾಜ್ಯದಲ್ಲಿದ್ದ 3 ಕೋಟಿಗೂ ಹೆಚ್ಚಿನ ಜನ ಸಂಖ್ಯೆಯು 60 ಲಕ್ಷಕ್ಕೆ ಇಳಿದಿದೆ ಎಂದರೆ ಸಮಾಜ ಎಷ್ಟರ ಮಟ್ಟಿಗೆ ಒಡೆದಿದೆ ಎಂಬುದನ್ನು ತಿಳಿಯಬಹುದು. ಸಮಾಜ ಕಟ್ಟುವ ಕೆಲಸವಾಗಬೇಕೆ ಹೊರತು ಒಡೆಯುವ ಕೆಲಸ ಆಗಬಾರದು ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ. ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಸಚಿವ ಸಂಪುಟ ಮರು ರಚನೆ ಆಗಲಿದ್ದು, ಆಗ ಶಾಸಕ ಬಿ.ಕೆ.ಸಂಗಮೇಶ್ವರ ಅವರನ್ನು ಮಂತ್ರಿ ಮಾಡಬೇಕು. ಈಗಿರುವ ಸ್ಥಾನಮಾನ ಅದು ನೆಪಮಾತ್ರ. ಅದು ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಸಮಾಧಾನ ತಂದಿರಬಹುದು. ಆದರೆ ಸಮಾಜಕ್ಕೆ ಸಮಾಧಾನ ತಂದಿಲ್ಲ ಎಂದರು.

ಸಮಾಜಕ್ಕೆ ಅನ್ಯಾಯವಾಗಲು ಬಿಡಲ್ಲ: ದಾವಣಗೆರೆಯಲ್ಲಿ ಏರ್ಪಡಿಸಿದ್ದ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ವೀರಶೈವ ಲಿಂಗಾಯತ ಎರಡೂ ಒಂದೇ ಎಂಬ ಧೃಢವಾದ ಸಂದೇಶ ನೀಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ಮಠಮಾನ್ಯ, ಮಂದಿರಗಳು ಹಿರಿಯರು ಹಾಕಿ ಕೊಟ್ಟ ಹಾದಿಯಲ್ಲಿ ಸಾಗಬೇಕಿದೆ ಎಂದರು. ಜಾತಿ ಗಣತಿ ಬಗ್ಗೆ ಸರ್ಕಾರದ ಮಟ್ಟದಲ್ಲಿ ಬಹಳಷ್ಟು ಚರ್ಚೆಗಳಾಗಿದೆ. ಈ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ 10 ವರ್ಷಗಳ ನಂತರ ಸಮಾಜದ ಸ್ಥಿತಿಗತಿ ತಿಳಿಯುವ ಸಲುವಾಗಿ ನಡೆಯುತ್ತಿರುವ ಜನಗಣತಿಯಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ. ಅದೇ ರೀತಿ ಬೇರೆ ಸಮಾಜಕ್ಕೂ ಅನ್ಯಾಯ ಮಾಡಲ್ಲ. ರಾಜ್ಯ ಸರ್ಕಾರವು ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಮಾಡುವ ಮೂಲಕ ಸಮಾಜದ ಎಲ್ಲ ವರ್ಗದವರಿಗೆ ನ್ಯಾಯ ನೀಡುವ ಮೂಲಕ ಎಲ್ಲರೂ ಒಂದೇ ಎಂಬ ಭಾವನೆ ಉಂಟುಮಾಡಿ ಗೌರವಿಸಿರುವುದು ಸಂತಸದ ಸಂಗತಿ ಎಂದರು.