ಸಾಗರದ ಅಜಿತ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಡಿವಿಜಿ ಅವರ ಬದುಕು ಬರಹ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪುರುಷೋತ್ತಮ ಕೋಲಾರ, ವಿ.ಟಿ.ಸ್ವಾಮಿ, ಮೇಜರ್ ನಾಗರಾಜ್ ಇತರರಿದ್ದರು.  
ನ್ಯೂಸ್

ಮಂಕುತಿಮ್ಮನ ಕಗ್ಗದಿಂದ ಸತ್ಯದ ಅನಾವರಣ

ಸಾಗರ: ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಬದುಕಿನ ಸತ್ಯವನ್ನು ತಿಳಿಸುವ ಮಾರ್ಗದರ್ಶಿ ಗ್ರಂಥವಾಗಿದೆ. ಸಾರ್ಥಕ ಮತ್ತು ನೈಜ ಬದುಕಿನ ಅರ್ಥವನ್ನು ಗ್ರಂಥ ಅನಾವರಣಗೊಳಿಸುತ್ತದೆ ಎಂದು ಸಾಹಿತಿ ಪುರುಷೋತ್ತಮ ಕೋಲಾರ ಹೇಳಿದರು.

ಪಟ್ಟಣದ ಅಜಿತ ಸಭಾಭವನದಲ್ಲಿ ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸದಲ್ಲಿ ಡಿವಿಜಿ ಸಾಹಿತ್ಯದಲ್ಲಿ ಪರಿಸರ ಮತ್ತು ವಿಜ್ಞಾನ ಕುರಿತು ಮಾತನಾಡಿ, ಕಗ್ಗ ಎಲ್ಲ ಅಂಶಗಳನ್ನು ಒಳಗೊಂಡಿದ್ದು, ಪ್ರಮುಖವಾಗಿ ಪರಿಸರ ಮತ್ತು ವಿಜ್ಞಾನದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿದೆ ಎಂದು ತಿಳಿಸಿದರು.

ಕಗ್ಗ ಪ್ರಶ್ನಿಸುವ, ಆಲೋಚನಾ ಕ್ರಮವನ್ನು ವಿಸ್ತರಿಸುವ ಕೆಲಸ ಮಾಡುತ್ತದೆ. ಮಾನವ ನಿರ್ಮಿತ ವಸ್ತುಗಳಿಂದ ಪರಿಸರಕ್ಕೆ ಹಾನಿಯಾಗಿದೆ ವಿನಃ ಪರಿಸರದಿಂದ ನಿರ್ಮಿತವಾಗಿರುವ ವಸ್ತುವಿನಿಂದ ಮನುಷ್ಯನಿಗೆ ಯಾವುದೆ ತೊಂದರೆ ಉಂಟಾಗಿಲ್ಲ. ಕಗ್ಗ ಅದನ್ನು ಪ್ರತಿಪಾದಿಸುವ ಜತೆಗೆ ತಿಳಿಸಿಕೊಡುವ ಕೆಲಸ ಮಾಡಿದೆ ಎಂದರು.

ದತ್ತಿದಾನಿ ಮೇಜರ್ ನಾಗರಾಜ್ ಮಾತನಾಡಿ, ಡಿವಿಜಿ ಅವರ ಕಗ್ಗ ಎಲ್ಲರೂ ಅರಿತುಕೊಳ್ಳಬೇಕು ಎನ್ನುವ ಉದ್ದೇಶದಿಂದ ದತಿ ನೀಡಲಾಗಿದೆ. ಈ ವರ್ಷ ಮಕ್ಕಳಿಗೆ ಡಿವಿಜಿ ಅವರ ಕಗ್ಗ ವಾಚನ ಮತ್ತು ಅರ್ಥ ವಿವರಣೆ ಸ್ಪರ್ಧೆ ನಡೆಸಲಾಗಿದೆ. ಮುಂದಿನ ವರ್ಷ ಮಕ್ಕಳಿಗೆ ಮತ್ತು ಪಾಲಕರಿಗೆ ಕಗ್ಗ ವಾಚನ ಮತ್ತು ಅರ್ಥ ವಿವರಣೆ ಸ್ಪರ್ಧೆ ಏರ್ಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಬಹುಮಾನ: ಡಿವಿಜಿ ಕಗ್ಗ ವಾಚನ ಮತ್ತು ಅರ್ಥ ವಿವರಣೆ ಸ್ಪರ್ಧೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚಿರಾಯು, ಪ್ರಗತಿ ಶಾಲೆ ಸಾಗರ(ಪ್ರಥಮ), ಆರಾಧ್ಯಾ ಹೆಗಡೆ, ಪ್ರಗತಿ ಶಾಲೆ ಸಾಗರ (ದ್ವಿತೀಯ), ಎಚ್.ಆರ್.ಅಮೃತಾ, ಪ್ಲೇಟೋ ಪಯೋನಿಯರ್ ಆವಿನಹಳ್ಳಿ (ತೃತೀಯ), ತೇಜಸ್ವಿನಿ, ಸೇವಾಸಾಗರ (ಚತುರ್ಥ), ಸಿರಿ, ಜ್ಞಾನಸಾಗರ (ಪಂಚಮ). ಪ್ರೌಢಶಾಲಾ ವಿಭಾಗದಲ್ಲಿ ಬಿ.ಸಹನಾ, ನಿರ್ಮಲ ಬಾಲಿಕಾ ಪ್ರೌಢಶಾಲೆ (ಪ್ರಥಮ), ಬಿ.ಬಿಂದು, ಸರ್ಕಾರಿ ಪ್ರೌಢಶಾಲೆ ಆವಿನಹಳ್ಳಿ (ದ್ವಿತೀಯ), ಅನ್ವಿತಾ ಪ್ರಗತಿ ಪ್ರೌಢಶಾಲೆ (ತತೀಯ), ತನ್ಮಯಿ ದಾಸ್, ಪ್ರಗತಿ ಪ್ರೌಢಶಾಲೆ (ಚತುರ್ಥ) ಬಹುಮಾನ ವಿಜೇತರಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ನಗರಸಭಾ ಸದಸ್ಯೆ ಸರಸ್ವತಿ ನಾಗರಾಜ್, ಪರಿಷತ್ ಗೌರವ ಕಾರ್ಯದರ್ಶಿ ಜಿ.ನಾಗೇಶ್, ಲೋಕೇಶ ಕುಮಾರ್, ಡಾ. ವೆಂಕಟೇಶ್ ಜೋಯಿಸ್, ನಾರಾಯಣಮೂರ್ತಿ ಇತರರಿದ್ದರು.