ಸಾಗರ: ಮನೆಯಲ್ಲಿ ಪುಟ್ಟ ರಂಗಮಂದಿರ ನಿರ್ಮಿಸಿ ಸಂಗೀತ, ನೃತ್ಯ, ಕಲೆಗೆ ಪ್ರೋತ್ಸಾಹಿಸುತ್ತಿರುವ ಜನಾರ್ದನ್ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಶ್ರೀನಗರದ ನೃತ್ಯ ಸಭಾಂಗಣದಲ್ಲಿ ನಾಟ್ಯತರಂಗ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹದ ಸಮಾರೋಪದಲ್ಲಿ ಮಾತನಾಡಿ, ಕಲೆ ಮತ್ತು ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸುತ್ತಿರುವ ಸಾಧಕರನ್ನು ಸರ್ಕಾರ, ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಸಿರಿವಂತೆ ಮಾತನಾಡಿ, ಹಸೆ ಚಿತ್ತಾರ ಅಭಿವ್ಯಕ್ತಿಯಲ್ಲಿ ಮನುಷ್ಯ ಜೀವನದ ಗುಣಧರ್ಮ ಸಂಕೇತವಿದೆ. ಜಾನಪದ ಕಲೆಯಲ್ಲಿ ಸಮಾಜ ವಿಜ್ಞಾನ, ಸಾಮಾನ್ಯ ವಿಜ್ಞಾನ, ಮನೋವಿಜ್ಞಾನ ಸಂಗತಿಗಳಿವೆ. ಅಕ್ಷರ ಕಲಿಕೆಗೂ, ಜೀವನ ವಿದ್ಯೆಗೂ ಸಂಬಂಧವಿಲ್ಲ ಎಂದರು.
ಮ.ಸ.ನಂಜುಂಡಸ್ವಾಮಿ, ವಸ್ತ್ರ ವಿನ್ಯಾಸ ಕೇಂದ್ರದ ರುದ್ರಪ್ಪ, ಕಥಕ್ ಕಲಾವಿದ ವಿಶ್ವನಾಥ ಶಿರೋಡ್ಕರ್, ನಾಟ್ಯತರಂಗ ಟ್ರಸ್ಟ್ ಸಂಚಾಲಕ ವಿದ್ವಾನ್ ಜಿ.ಬಿ.ಜನಾರ್ದನ್ ಹಾಜರಿದ್ದರು. ಬೆಂಗಳೂರಿನ ನಾದಂ ಸಂಸ್ಥೆಗೆ ಸಾಂಸ್ಕೃತಿಕ ಸಾರಥಿ ಗೌರವ ಸಮರ್ಪಿಸಲಾಯಿತು. ನಾಟ್ಯಗುರು ಜಿ.ಬಿ.ಜನಾರ್ದನ್ ದಂಪತಿಯನ್ನು ಕಲಾಪೋಷಕ ಆರ್.ಎಂ.ಬಾಪಟ್ ಅವರು ಸನ್ಮಾನಿಸಿದರು.
ಬಾಲಪ್ರತಿಭೆ ಆರ್ಯಾ ಶೆಣೈ ಅವರಿಂದ ಕೊನ್ನಕ್ಕೋಲ್ ಪ್ರಸ್ತುತಿ, ಬಾಲ ಪ್ರತಿಭೆಗಳಾದ ಪೂರ್ವಿ ಕೆ. ಶೆಣೈ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಶಿವಾನಿ ಕೆ. ಶೆಣೈ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ನಗರಸಭೆ ಸದಸ್ಯ ಗಣೇಶ್‌ಪ್ರಸಾದ್, ಮೇಘಾ, ರಂಜನಾ, ಸಮುದ್ಯತಾ ಇತರರಿದ್ದರು.