ಹೊಸನಗರ: ಕ್ಷೇತ್ರದ ಅಭಿವೃದ್ಧಿಗೆ ಬೊಗಸೆ ತುಂಬ ಅನುದಾನ ತಂದಿದ್ದ ಕೈಗಳು ಇಂದು ಬರಿದಾಗಿವೆ. ಅನುದಾನ ಕೊರತೆಯಿಂದ ಕ್ಷೇತ್ರದ ಹಳ್ಳಿಗಳಲ್ಲಿ ಜನರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ ಶಾಸಕ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದರು.
ಸುಳುಗೋಡು ಗ್ರಾಪಂನಲ್ಲಿ ಕಾರ್ಮಿಕ ಇಲಾಖೆ ಏರ್ಪಡಿಸಿದ್ದ ಕಾರ್ಮಿಕರಿಗೆ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಗೃಹ ಸಚಿವನಾಗಿ ಕೆಲಸ ಮಾಡಿದ್ದು, ಕ್ಷೇತ್ರದ ಅಭಿವೃದ್ಧಿಗೆ 3,200 ಕೋಟಿ ರೂ. ಅನುದಾನ ತಂದಿದ್ದೆ. ಕ್ಷೇತ್ರವ್ಯಾಪ್ತಿಯ ಎಲ್ಲೆಡೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿತ್ತು. ಈಗಿನ ಸರ್ಕಾರದಲ್ಲಿ ಸಿಗುತ್ತಿರುವ 2-3 ಲಕ್ಷ ರೂ. ಅಭಿವೃದ್ಧಿ ಕೆಲಸಕ್ಕೆ ಸಾಕಾಗುವುದಿಲ್ಲ. ಅಭಿವೃದ್ಧಿ ಬೇಡಿಕೆ ಪಟ್ಟಿ ಜನರಿಗೆ ಉತ್ತರಿಸಲು ಸಹ ಆಗುತ್ತಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಅನುದಾನ ಕೇಳಿದರೆ, ಸರ್ಕಾರ ಪ್ರತಿ ಕುಟುಂಬಕ್ಕೆ 2 ಸಾವಿರ ರೂ. ನೀಡುತ್ತಿದ್ದು, ಜನರು ಖುಷಿಯಿಂದ ಇದ್ದಾರೆ ಎನ್ನುತ್ತಾರೆ. ರಸ್ತೆ, ನೀರು, ಅಗತ್ಯ ಮೂಲಸೌಕರ್ಯಕ್ಕೆ ಅನುದಾನ ನೀಡದಿದ್ದರೆ, ಶಾಲೆಗಳಿಗೆ ಅನುದಾನ ನೀಡದಿದ್ದರೆ ಮುಂದೇನು ಎನ್ನುವುದು ಪ್ರಶ್ನೆಯಾಗಿದೆ ಎಂದರು.
ಕರೊನಾ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಲ್ಲಿ 5 ಸಾವಿರ ಕೋಟಿ ರೂ.ಗಳನ್ನು ಕಾರ್ಮಿಕರಿಗೆ ವಿನಿಯೋಗಿಸಬೇಕು ಎಂಬ ಬಿಜೆಪಿ ಸರ್ಕಾರದ ತೀರ್ಮಾನದಿಂದ ಇಂದು ಕಟ್ಟಡ ಕಾರ್ಮಿಕರಿಗೆ ಕಿಟ್ ನೀಡಲಾಗುತ್ತಿದೆ. ಕಾರ್ಮಿಕ ಕಿಟ್ ಕರೊನಾ ಕಾಲದಲ್ಲಿ ಬಡಕಾರ್ಮಿಕರಿಗೆ ಆಸರೆಯಾಗಿತ್ತು. ಅಂದು ದಿನಸಿ ವಸ್ತು, ಇಂದು ಕಾಮಗಾರಿ ಸಲಕರಣೆಗಳನ್ನು ಕಿಟ್ ಮೂಲಕ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಸುಳುಗೋಡು ಗ್ರಾಪಂನ ಶ್ರುತಿ ಶೇಷಾದ್ರಿ, ತಾಪಂ ಮಾಜಿ ಸದಸ್ಯ ಮಂಜುನಾಥ್, ತಾಲೂಕು ಕಾರ್ಮಿಕ ಸಂಘಟನೆ ಅಧ್ಯಕ್ಷ ರೂಪ್ಲಾ ನಾಯಕ್, ಸುಳುಗೋಡು ಕಾರ್ಮಿಕ ಸಂಘಟನೆ ಅಧ್ಯಕ್ಷ ಮಂಜುನಾಥ್, ಗ್ರಾಪಂ ಸದಸ್ಯರಾದ ಸುಧೀರಕುಮಾರ್, ಸದಾನಂದ, ಭಾಸ್ಕರ ಜೋಯ್ಸ, ಕಾರ್ಮಿಕ ಅಧಿಕಾರಿ ಶಿಲ್ಪಾ ಇತರರಿದ್ದರು.
ಗುದ್ದಲಿ ಪೂಜೆ: ಹೊಸನಗರ ತಾಲೂಕಿನ ಯಡೂರು ಗ್ರಾಪಂ ವ್ಯಾಪ್ತಿ ಕೊಳವಾಡಿ ಗ್ರಾಮದಲ್ಲಿ 45 ಲಕ್ಷ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಶಾಸಕ ಆರಗ ಜ್ಞಾನೇಂದ್ರ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು. ಯಡೂರು ಗ್ರಾಪಂ ಅಧ್ಯಕ್ಷ ಜಯಪ್ರಕಾಶ, ಮಾಜಿ ಅಧ್ಯಕ್ಷೆ ಕಲಾವತಿ, ಯಡೂರು ಸತೀಶ್ ಇತರರು ಇದ್ದರು.