ಶಿಕಾರಿಪುರ: ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣ ಪ್ರಪಂಚದ ಅತ್ಯಂತ ಶ್ರೇಷ್ಠ ಗ್ರಂಥ ಎಂದು ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಆಚಾರ ಮತ್ತು ವಿಚಾರಗಳಿಗೆ ಗ್ರಂಥ ಪ್ರೇರಣೆಯಾಗಿದೆ. ಅದೊಂದು ಮಹಾಕಾವ್ಯ ಎಂದು ಬಣ್ಣಿಸಿದರು.
ತಾಲೂಕು ಮಹರ್ಷಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ವಾಲ್ಮೀಕಿ ಸಮಾಜ ಅತ್ಯಂತ ಸ್ವಾಭಿಮಾನಿ, ಪರಿಶ್ರಮಿ ಸಮುದಾಯ. ಈ ಸಮಾಜ ಇನ್ನಷ್ಟು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ. ನಾವು ಸಮಾಜದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಮುಂದಿನ ಪೀಳಿಗೆಗೆ ಶಿಕ್ಷಣ ಕೊಡಿಸಿ ಸಾಕ್ಷರ ಸಮಾಜ ನಿರ್ಮಾಣ ಮಾಡಬೇಕು ಎಂದರು.
ತಹಸೀಲ್ದಾರ್ ಮಂಜುಳಾ ಭಜಂತ್ರಿ, ಇಒ ನಾಗರಾಜ್, ಸಮಾಜ ಕಲ್ಯಾಣ ಅಧಿಕಾರಿ ಮಧುಸೂದನ್, ಉಪನ್ಯಾಸಕ ಪಾಂಡು, ವಾಲ್ಮೀಕಿ ಸಮಾಜದ ಮಾಜಿ ಅಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಟಿ.ಲೋಕೇಶ್, ಬಸವರಾಜಪ್ಪ, ರಂಗಪ್ಪ, ಸುರೇಶ್, ಹೊಳೆಯಪ್ಪ, ಉಮೇಶ್, ಎಚ್.ಡಿ.ಮಹದೇವಪ್ಪ, ಸುರೇಶ್, ವೀರೇಶ್ ಇತರರಿದ್ದರು.