ಸಾಗರದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಆರ್‌ಡಿಪಿಆರ್ ಕ್ರೀಡಾಹಬ್ಬವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಆರ್.ಪ್ರವೀಣಕುಮಾರ್, ಶಿವಪ್ರಕಾಶ್, ಗುರುಕೃಷ್ಣ ಶೆಣೈ ಇತರರಿದ್ದರು. 
ನ್ಯೂಸ್

ನೌಕರರು ಆರೋಗ್ಯ ಕಾಳಜಿ ವಹಿಸಿ

ಸಾಗರ: ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನೌಕರರು ಮುಖ್ಯ ಪಾತ್ರ ವಹಿಸುತ್ತಾರೆ. ಸರ್ಕಾರಿ ಸೇವೆಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ನೌಕರರ ಸಂಘದಿಂದ ಏರ್ಪಡಿಸಿದ್ದ ಆರ್‌ಡಿಪಿಆರ್ ಕ್ರೀಡಾಹಬ್ಬ ಉದ್ಘಾಟಿಸಿ ಮಾತನಾಡಿದರು.

ಇಲಾಖೆ ಅಧಿಕಾರಿ ಮತ್ತು ನೌಕರರು ಉತ್ತಮವಾಗಿ ಕೆಲಸ ಮಾಡಬೇಕು. ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಿ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಸೂಕ್ತ ಸಂದರ್ಭದಲ್ಲಿ ತಲುಪಿಸಲು ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು. ಜನರಿಗೆ ಉತ್ತಮ ಸೇವೆ ನೀಡಬೇಕು ಎಂದು ತಿಳಿಸಿದರು.

ಅಭಿವೃದ್ಧಿ ಮತ್ತು ಜನಸ್ಪಂದನೆ ಅತಿಮುಖ್ಯ. ಗ್ರಾಮೀಣ ಭಾಗದಲ್ಲಿ ನಿಮ್ಮ ಮೂಲಕ ಸರ್ಕಾರದ ಸೇವೆ ಜನರಿಗೆ ತಲುಪುತ್ತಿದೆ. ನೌಕರರು ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಬೇರೆಬೇರೆ ಕಾರಣಕ್ಕೆ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಅಧಿಕಾರಿ, ನೌಕರರು ಒತ್ತಡಕ್ಕೆ ಒಳಗಾಗಬಾರದು ಎಂದರು.

ಒತ್ತಡದ ನಡುವೆ ಕೆಲಸ ಮಾಡುವಾಗ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಆರೋಗ್ಯಪೂರ್ಣವಾಗಿ ಕರ್ತವ್ಯ ನಿರ್ವಹಿಸಬಹುದು ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ನೌಕರರ ಸಂಘದ ಅಧ್ಯಕ್ಷ ಆರ್.ಪ್ರವೀಣಕುಮಾರ್, ತಾಪಂ ಇಒ ಶಿವಪ್ರಕಾಶ್, ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತ ಗುರುಕೃಷ್ಣ ಶೆಣೈ, ಪ್ರಮುಖರಾದ ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ, ಗಂಗಾಧರ ನಾಯಕ್, ಕೇಶವಮೂರ್ತಿ, ರವಿಕುಮಾರ್, ಸುಮಾ, ಸುಬ್ರಹ್ಮಣ್ಯ, ಸೌಮ್ಯ, ಮಹ್ಮದ್ ಹನೀಫ್, ರಾಘವೇಂದ್ರ ಕುಮಾರ್ ಇತರರಿದ್ದರು.