ಆಯನೂರು: ಸಮೀಪದ ಕುಂಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಶಾಲಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಕುಂಸಿ ಭಾಗದ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 3 ಸಾವಿರ ವಿದ್ಯಾರ್ಥಿಗಳಿಗೆ ಪೆನ್, ಪೆನ್ಸಿಲ್ ಹಾಗೂ ನೋಟ್‌ಬುಕ್ ಮತ್ತಿತರ ಸಾಮಗ್ರಿಗಳನ್ನು ಪೈಲ್ವಾನ್ ರಾಮಪ್ಪ ಅವರ ಸ್ಮರಣಾರ್ಥ ವಿತರಿಸಲಾಯಿತು.
ಗ್ರಾಮದ ಹುಲುಗಪ್ಪ ಮಾತನಾಡಿ, ಬಡತನದಲ್ಲಿ ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಂದ ದುಡಿಮೆಯ ಸ್ವಲ್ಪ ಭಾಗದಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸೇವಾ ಆಶಯದಿಂದ 19 ವರ್ಷಗಳಿಂದ ಉಚಿತವಾಗಿ ನೋಟ್‌ಬುಕ್ ವಿತರಿಸಲಾಗುತ್ತಿದೆ. ಕುಂಸಿ, ದೊಡ್ಡಿಮಟ್ಟಿ, ಉರ್ದುಶಾಲೆ, ಕಾಲೇಜಿನ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಮಥುರಾ ರೆಸಿಡೆನ್ಸಿ ಮಾಲೀಕ ರಾಜೇಂದ್ರ ಮಾತನಾಡಿ, ವಿದ್ಯಾರ್ಥಿಗಳು ಬುದ್ಧಿವಂತರಾದರೆ ದೇಶ ಪ್ರಗತಿ ಹೊಂದಲಿದೆ. ಅನೇಕರು ಗ್ರಾಮದಲ್ಲಿ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತಾರೆ. ಕಷ್ಷಕ್ಕೆ ಮರುಗುವ ಮತ್ತು ದಾನ ಮಾಡುವ ಮನಸ್ಸು ಎಲ್ಲರಲ್ಲೂ ಇರುವುದಿಲ್ಲ. ಪ್ರತಿ ಗ್ರಾಮದಲ್ಲಿ ಸಮಾಜಮುಖಿ ಮನೋಭಾವದವರು ಇರಬೇಕು ಎಂದರು.
ಕುಂಸಿ ಗ್ರಾಪಂ ಅಧ್ಯಕ್ಷ ಆಂಜನೇಯ, ಉಪಾಧ್ಯಕ್ಷೆ ಶಾರದಾ ರಂಗನಾಥ, ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್, ಮಂಜುನಾಥೇಶ್ವರ ಶಾಲೆ ಮುಖ್ಯಶಿಕ್ಷಕ ಹಾಲೇಶಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಎನ್.ಧರ್ಮೇಂದ್ರ, ಗ್ರಾಮದ ಪ್ರಮುಖರಾದ ಹುಚ್ಚುವೀರಪ್ಪ ಕರಡಿ, ಸಿದ್ದಪ್ಪ, ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿದ್ದರು.