ಭದ್ರಾವತಿ: ವೈಶಾಖ ಮಾಸದ ಶುದ್ಧ ದಶಮಿ ದಿನ ಶ್ರೀನಿವಾಸ ದೇವರ ಕಲ್ಯಾಣವಾದ ದಿನದಂದು ಪ್ರತಿ ವರ್ಷ ಎಲ್ಲೆಡೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ಆಚರಿಸಲಾಗುತ್ತದೆ ಎಂದು ಉಡುಪಿಯ ಪಂಡಿತ ಆಯನೂರು ಮಧುಸೂದನಾಚಾರ್ ಹೇಳಿದರು.
ಸಿದ್ಧಾರೂಢ ನಗರದಲ್ಲಿರುವ ಶ್ರೀನಿವಾಸ ದೇವರ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣ ಸಮಿತಿ ಹಾಗೂ ಸಂಕರ್ಷಣ ಧರ್ಮಸಂಸ್ಥೆ ಸಂಯುಕ್ತವಾಗಿ ಏರ್ಪಡಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಶ್ರೀ ವೆಂಕಟೇಶ ಕಲ್ಯಾಣ ಕಥಾನುವಾದದ ಮಂಗಳ ಮಹೋತ್ಸವದಲ್ಲಿ ಉಪನ್ಯಾಸ ನೀಡಿದರು.
ಶ್ರೀನಿವಾಸ ಕಲ್ಯಾಣ ಕಥಾ ಶ್ರವಣ ಮಾಡುವುದರಿಂದ ಅನಂತ ಪುಣ್ಯಫಲ ಲಭಿಸುವುದರ ಜತೆ ಭಗವಂತನ ಅನುಗ್ರಹ ದೊರಕುತ್ತದೆ. ಜೀವನದ ಸಾರ್ಥಕತೆಯು ಚುತುರ್ವಿಧ ಫಲಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷ್ಯ ಹಾಗೂ ಭಗವಂತನ ಕಾರುಣ್ಯ ಪಡೆಯಲು ಅಗತ್ಯವಾದ ಜ್ಞಾನ, ಭಕ್ತಿ, ವೈರಾಗ್ಯ ಎಲ್ಲವೂ ಶ್ರೀನಿವಾಸ ಕಲ್ಯಾಣ ಕಥಾಪಠಣ ಮಾಡುವುದರಿಂದ ದೊರಕುತ್ತದೆ ಎಂದರು.
ಬೆಳಗ್ಗೆ ಮೂಲದೇವರಿಗೆ ಅಭಿಷೇಕ ಅಲಂಕಾರ ಮಾಡಿದ ನಂತರ ಶ್ರೀಪದ್ಮಾವತಿ, ಶ್ರೀದೇವಿ ಸಹಿತ ಶ್ರೀನಿವಾಸದೇವರ ಉತ್ಸವ ಮೂರ್ತಿಯನ್ನು ದೇವಾಲಯದ ಪ್ರಾಕಾರದಲ್ಲಿ ಉತ್ಸವ ನಡೆಸಿ ನಂತರ ದೇವರ ಕಲ್ಯಾಣೋತ್ಸವ ನಡೆಸಲಾಯಿತು. ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಪಂಡಿತ ಗೊಪಾಲಾಚಾರ್ ಪೌರೋಹಿತ್ಯ ನಡೆಸಿದರು.
ಶ್ರೀನಿವಾಸ ಕಲ್ಯಾಣ ಸಮಿತಿ ಸಂಕರ್ಷಣ ಧರ್ಮಸಂಸ್ಥೆಯ ವಾಸು, ಕಲ್ಲಾಪುರ ರಾಮಚಂದ್ರ, ವೆಂಕಟೇಶ, ಶೇಷಗಿರಿ ಆಚಾರ್, ಜಗನ್ನಾಥಾಚಾರ್, ರಮಾಕಾಂತ, ನಿರಂಜನಾಚಾರ್, ಮಧುಸೂದನ, ಭಕ್ತಾರು ಇದ್ದರು.