ನ್ಯೂಸ್

ಆಟೋ ಮೀಟರ್‌ಗೆ ಈ ತಿಂಗಳೇ ಡೆಡ್‌ಲೈನ್: ಎಸ್ಪಿ ಎಚ್ಚರಿಕೆ

Shivamogga

ಶಿವಮೊಗ್ಗ: ಆಟೋಗಳಿಗೆ ಮೀಟರ್ ಅಳವಡಿಕೆಗೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅಂತಿಮ ಗಡುವು ನೀಡಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಮೀಟರ್ ಅಳವಡಿಸಿಕೊಳ್ಳದ ಆಟೋಗಳಿಗೆ ದಂಡಪ್ರಯೋಗ ನಿಶ್ಚಿಯ ಎಂದು ಎಚ್ಚರಿಸಿದ್ದಾರೆ.

ಡಿಎಆರ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ಡಿಸ್‌ಫ್ಲೇ ಕಾರ್ಡ್ ವಿತರಿಸಿ ಮಾನಾಡಿದ ಅವರು, ಫೆಬ್ರವರಿ ಅಂತ್ಯದೊಳಗೆ ಎಲ್ಲ ಆಟೋಗಳಿಗೂ ಮೀಟರ್ ಹಾಗೂ ಡಿಸ್‌ಫ್ಲೇ ಕಾರ್ಡ್ ಅಳವಡಿಸಿಕೊಳ್ಳಲು ಚಾಲಕರು ಹಾಗೂ ಮಾಲೀಕರು ಮುಂದಾಗಬೇಕೆಂದು ತಿಳಿಸಿದರು.

ಆಟೋ ಡಿಸ್‌ಪ್ಲೇ ಕಾರ್ಡ್‌ನಲ್ಲಿ ಆಟೋ ನೋಂದಣಿ ಸಂಖ್ಯೆ, ಮಾಲೀಕರು, ಚಾಲಕರ ಹೆಸರು, ವಿಳಾಸ, ಆಟೋ ಬಾಡಿಗೆ ದರ ಮತ್ತು ಕ್ಯೂಆರ್ ಕೋಡ್‌ನಲ್ಲಿ ಸಂಪೂರ್ಣ ವಿವರಗಳು ಲಭ್ಯವಾಗಲಿವೆ. ಇದರಿಂದ ಸಾರ್ವಜನಿಕರಿಗೆ ಪ್ರಯಾಣ ಸಮಯದಲ್ಲಿ ಅನುಕೂಲವಾಗಲಿದೆ. ಆಟೋ ಚಾಲಕರು ಏನಾದರೂ ಕಿರಿಕಿರಿ ಮಾಡಿದರೆ ಪೊಲೀಸರಿಗೆ ದೂರು ನೀಡಲು ಸಹಾಯವಾಗುತ್ತದೆ ಎಂದು ಹೇಳಿದರು.

ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿ, ಆಟೋ ಡಿಸ್‌ಪ್ಲೇ ಕಾರ್ಡ್ ಅಳವಡಿಸಿಕೊಳ್ಳುವುದು ಆಟೋ ಮಾಲೀಕರು ಹಾಗೂ ಚಾಲಕರ ಕರ್ತವ್ಯವಾಗಿದೆ. ಈ ಕಾರ್ಯದಲ್ಲಿ ಪೊಲೀಸರೊಂದಿಗೆ ಆಟೋ ಚಾಲಕರು ಕೈ ಜೋಡಿಸಬೇಕೆಂದರು.

ಶಿವಮೊಗ್ಗ ಸಂಚಾರ ವೃತ್ತ ನಿರೀಕ್ಷಕಿ ಜಯಶ್ರೀ ಎಸ್.ಮಾನೆ, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಶೈಲಜಾ ಮುಂತಾದವರಿದ್ದರು.