ಸಾಗರ ಸಮೀಪ ಕಳಸವಳ್ಳಿ ಅಂಬಾರಗೋಡ್ಲು ಸೇತುವೆ ನಿರ್ಮಾಣದ ಕಾಮಗಾರಿಯನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವೀಕ್ಷಿಸಿದರು. ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಪ್ರಸನ್ನ ಕೆರೆಕೈ, ಹೊನಗೋಡು ರತ್ನಾಕರ್ ಇತರರಿದ್ದರು.  
ನ್ಯೂಸ್

ಜೂನ್ ಅಂತ್ಯಕ್ಕೆ ಸಿಗಂದೂರು ಸೇತುವೆ ಉದ್ಘಾಟನೆ

ಸಾಗರ: ಶರಾವತಿ ಹಿನ್ನೀರಿನ ಜನರ ಅನೇಕ ವರ್ಷಗಳ ಕನಸು ನನಸಾಗುವ ದಿನ ಹತ್ತಿರ ಬಂದಿದ್ದು, ಜೂನ್ ಅಂತ್ಯಕ್ಕೆ ಸಿಗಂದೂರು ಸೇತುವೆ ಲೋಕಾರ್ಪಣೆಯಾಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಕಾಮಗಾರಿಯನ್ನು ವೀಕ್ಷಿಸಿ ಸೇತುವೆ ಮೇಲೆ ವಾಹನದ ಮೂಲಕ ಓಡಾಟ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅನೇಕ ಪ್ರಮುಖರು ಸೇತುವೆ ನಿರ್ಮಾಣಕ್ಕಾಗಿ ಹೋರಾಟ ಸಹ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಸಂಸದರಾಗಿದ್ದಾಗ ಸೇತುವೆ ನಿರ್ಮಾಣ ಪ್ರಸ್ತಾಪ ಕೇಂದ್ರಕ್ಕೆ ಸಲ್ಲಿಸಿದ್ದರು. ಕೇಂದ್ರದಿಂದ ಹಣ ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ನಾಲ್ಕೂವರೆ ವರ್ಷದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಉದ್ಘಾಟನೆಗೆ ಕರೆಸಲಾಗುವುದು ಎಂದು ತಿಳಿಸಿದರು.

ಶರಾವತಿ ಹಿನ್ನೀರಿನ ಪ್ರದೇಶ ತುಮರಿ ಭಾಗ ನಿರ್ಲಕ್ಷೃಕ್ಕೆ ಒಳಗಾಗಿತ್ತು. ಸೇತುವೆ ನಿರ್ಮಾಣದ ನಂತರ ಪ್ರವಾಸೋದ್ಯಮ ಹೆಚ್ಚು ಪ್ರಚಲಿತಕ್ಕೆ ಬರಲಿದೆ. ಹಿನ್ನೀರನ್ನು ಕೇಂದ್ರವಾಗಿರಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು, ಸಾವಿರಾರು ಜನರು ಪ್ರತಿದಿನ ಈ ಭಾಗಕ್ಕೆ ಪ್ರವಾಸೋದ್ಯಮ ದೃಷ್ಟಿಯಿಂದ ಬರುವ ವಾತಾವರಣ ನಿರ್ಮಾಣ ಮಾಡಲಾಗುವುದು. ಬಿ.ವೈ.ರಾಘವೇಂದ್ರ ಲೋಕಸಭಾ ಸದಸ್ಯ

ತುಮರಿ ಸೇತುವೆ ಸಂಪರ್ಕಿಸುವ ಅಂಬಾರಗೋಡ್ಲು, ಮತ್ತೊಂದು ಸಂಪರ್ಕ ರಸ್ತೆ ಕಳಸವಳ್ಳಿ ರಸ್ತೆ ನಿರ್ಮಾಣಕ್ಕೆ 900 ಕೋಟಿ ರೂ. ಮಂಜೂರು ಮಾಡಲಾಗಿದೆ. ಎರಡು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ ಮಾಡಿದ್ದು, ರಸ್ತೆ ನಿರ್ಮಾಣ ಕುರಿತು ಯೋಜನೆ ರೂಪಿಸುತ್ತಿದ್ದು, ಹದಿನೈದು ದಿನದಲ್ಲಿ ಅಂತಿಮ ಸ್ವರೂಪಕ್ಕೆ ಬರಲಾಗುವುದು ಎಂದರು.

ಹೊಸನಗರ ಸಮೀಪ 766-ಇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಳ್ಳುತ್ತಿದ್ದು, ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಹೊಸನಗರ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಮುಕ್ಕಾಲು ಕಿ.ಮೀ. ಬೆಕ್ಕೋಡಿ ಸೇತುವೆ ನಿರ್ಮಾಣವಾಗಿದೆ. ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು, ಈಗ ಕಾಮಗಾರಿ ನಡೆಯುತ್ತಿದೆ. ಒಟ್ಟಾರೆ ಮಲೆನಾಡು ಭಾಗದ ಪ್ರಮುಖ ಸೇತುವೆಗಳು ನಿರ್ಮಾಣವಾಗುತ್ತಿವೆ. ಕೇಂದ್ರದಿಂದ ಮಲೆನಾಡು ಭಾಗದ ರಸ್ತೆ ಮತ್ತು ಸೇತುವೆಗೆ ಹೆಚ್ಚು ಹಣ ಮಂಜೂರಾಗಿದೆ. ಮಲೆನಾಡು ಮತ್ತು ಕರಾವಳಿ ಭಾಗ ಸಂಪರ್ಕ ಮಾಡಲು ಹೆಚ್ಚು ಅನುಕೂಲವಾಗಿದೆ ಎಂದು ತಿಳಿಸಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮೈತ್ರಿ ಪಾಟೀಲ್, ಮಲ್ಲಿಕಾರ್ಜುನ ಹಕ್ರೆ, ಪ್ರಸನ್ನ ಕೆರೆಕೈ, ಹೊನಗೋಡು ರತ್ನಾಕರ್, ಭರ್ಮಪ್ಪ ಅಂದಾಸುರ, ರೇವಪ್ಪ ಹೊಸಕೊಪ್ಪ, ಸುವರ್ಣ ಟೀಕಪ್ಪ, ಸಂತೋಷ್ ಶೇಟ್ ಇತರರಿದ್ದರು.