ಸಾಗರ: ಸಹೃದಯ ಬಳಗ, ತಾಲೂಕು ಇತಿಹಾಸ ವೇದಿಕೆಯ ಆಶ್ರಯದಲ್ಲಿ ತಾಲೂಕು ಮಟ್ಟದ ಆರನೇ ಇತಿಹಾಸ ಸಮ್ಮೇಳನ ನಡೆಯಲಿದೆ. ಇತಿಹಾಸ ತಜ್ಞ ಹಾಗೂ ಪ್ರಾಧ್ಯಾಪಕ ಡಾ. ಕೆ.ಪ್ರಭಾಕರ ರಾವ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.
ಜ.5ರಂದು ಬೆಳಗ್ಗೆ 10ಕ್ಕೆ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ಆಯೋಜಿಸಿರುವ ಸಮ್ಮೇಳನವನ್ನು ತುಮಕೂರು ವಿಶ್ವವಿದ್ಯಾಲಯ ಇತಿಹಾಸ ವಿಭಾಗದ ಹಿರಿಯ ಉಪನ್ಯಾಸಕ ಡಾ. ಎಂ.ಕೊಟ್ರೇಶ್ ಉದ್ಘಾಟಿಸುವರು. ಇತಿಹಾಸ ವೇದಿಕೆ ಅಧ್ಯಕ್ಷ ಡಾ. ಕೆಳದಿ ವೆಂಕಟೇಶ್ ಜೋಯ್ಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಇತಿಹಾಸಕ್ಕೆ ಸಾಗರ ತಾಲೂಕಿನ ಕೊಡುಗೆ ವಿಷಯ ಕುರಿತು ಇತಿಹಾಸ ತಜ್ಞ ಡಾ. ಕೆ.ಜಿ.ವೆಂಕಟೇಶ್ ಶಿವಮೊಗ್ಗ ಉಪನ್ಯಾಸ ನೀಡುವರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ಇಂದಿರಾ ಗಾಂಧಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ. ಎಚ್.ರಾಜೇಶ್ವರಿ, ಎಂಡಿಎ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಶಿಲ್ಪಾ, ನಗರಸಭೆ ಸದಸ್ಯ ಕೆ.ಆರ್.ಗಣೇಶಪ್ರಸಾದ್, ಮಾಜಿ ಸದಸ್ಯ ಕೆ.ಸಿದ್ದಪ್ಪ, ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಎಸ್.ಬಸವರಾಜ್, ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಅಧ್ಯಕ್ಷ ಎಚ್.ಆರ್.ನಾಗಭೂಷಣ್, ಸಮಾಜ ಕಲ್ಯಾಣ ಇಲಾಖೆಯ ಸುರೇಶ್ ಸಹಾನಿ ಉಪಸ್ಥಿತರಿರುವರು.
ಸಮ್ಮೇಳನಾಧ್ಯಕ್ಷರ ಪರಿಚಯ: ಸಾಗರ ತಾಲೂಕಿನ ಗಾಂಧಿನಗರದ ನಿವಾಸಿ ಡಾ. ಕೆ.ಪ್ರಭಾಕರ ರಾವ್, ಪ್ರಸ್ತುತ ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿ ವ್ಯಾಸಂಗ ಮಾಡಿ, 1988-1990ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಿಂದ ಎಂ.ಎ. ಪದವಿ ಪಡೆದಿದ್ದಾರೆ.
2007ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ಚರಿತ್ರೆ ಸಂಪುಟಗಳ ಎರಡನೇ ಅಧ್ಯಾಯದಲ್ಲಿ ಕೆಲ ಅಧ್ಯಾಯಗಳನ್ನು ಬರೆದಿದ್ದಾರೆ. ಭಾರತೀಯ ಇತಿಹಾಸಕಾರರು, ಇದು ನಮ್ಮ ಸಾಗರ, ಕರ್ನಾಟಕದ ಸಾಂಸ್ಕೃತಿಕ ಇತಿಹಾಸ ಎಂಬ ಕೃತಿಗಳನ್ನು ಬರೆದಿದ್ದಾರೆ.
ಮಧ್ಯಕಾಲೀನ ಕರ್ನಾಟಕದ ಕೆರೆಗಳ ನಿರ್ವಹಣೆ, ತುರುಗಳವು, ಕೋಟೆಕಾಳಗ, ವೀರಗಲ್ಲು ಶಾಸನ ಶಿಲ್ಪಗಳು ಸೇರಿ ಇತಿಹಾಸಕ್ಕೆ ಸಂಬಂಧಪಟ್ಟ ವಿಷಯಗಳ ಕುರಿತು ಲೇಖನಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ಅನೇಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಡಾ. ಕೆ.ಪ್ರಭಾಕರ್ ರಾವ್ ಅವರಿಗೆ ವಿವಿಧ ಸಂಘಟನೆಗಳ ಪ್ರಶಸ್ತಿಗಳು ಮತ್ತು ಸನ್ಮಾನಗಳು ಸಂದಿವೆ.