ಶಿವಮೊಗ್ಗ: ಭದ್ರಾವತಿಯಲ್ಲಿ ನಿರ್ಮಾಣಗೊಳ್ಳಲಿರುವ ಆರ್‌ಎಎಫ್(ಕ್ಷಿಪ್ರ ಕಾರ್ಯ ಪಡೆ) ಘಟಕ ಜಿಲ್ಲೆಯ ಹೆಮ್ಮೆಯ ಜತೆಗೆ ಇಡೀ ದಕ್ಷಿಣ ಭಾರತದ ಆಸ್ತಿ ಆಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸಂತಸ ವ್ಯಕ್ತಪಡಿಸಿದರು.
ನಗರದಲ್ಲಿ ಆರ್‌ಎಎಫ್ ಘಟಕ ಶಂಕುಸ್ಥಾಪನೆ ಕುರಿತು ಮಾತನಾಡಿದ ಅವರು, ನಾಲ್ಕು ರಾಜ್ಯಗಳಿಗೆ ಸಂಬಂಧಿಸಿದ ಆರ್‌ಎಎಫ್ ಘಟಕ ಭದ್ರಾವತಿಯ ಬುಳ್ಳಾಪುರದಲ್ಲಿ ಆರಂಭವಾಗಲಿದೆ. ಜ.17ರ ಮಧ್ಯಾಹ್ನ 12ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಂಕುಸ್ಥಾಪನೆ ನೆರವೇರಿಸುವರು ಎಂದರು.
ಕರೊನಾನಂತಹ ಸಂಕಷ್ಟದ ಸಂದರ್ಭದಲ್ಲೂ ನಮ್ಮ ಮನವಿ ಪುರಸ್ಕರಿಸಿದ ಕೇಂದ್ರ ಸರ್ಕಾರ ಜಿಲ್ಲೆಗೆ ಈ ಘಟಕ ನೀಡಿರುವುದು ಹೊಸ ಉತ್ಸಾಹ ಮೂಡಿಸಿದೆ. ಈ ಘಟಕ ಆರಂಭವಾಗುವುದರಿಂದ ನಾಲ್ಕರಿಂದ ಐದು ಸಾವಿರ ಕುಟುಂಬಗಳು ನೆಲೆಸಲಿದ್ದು, ಹೊಸ ಟೌನ್‌ಶಿಪ್ ಸಹ ನಿರ್ಮಾಣವಾಗಲಿದೆ ಎಂದರು.
ಭದ್ರಾವತಿಯನ್ನು ಕೈಗಾರಿಕಾ ಹಬ್ ಆಗಿ ಮಾಡಬೇಕು ಎಂಬ ಸರ್ ಎಂ.ವಿಶ್ವೇಶ್ವರಯ್ಯನವರ ಕನಸಿಗೆ ಪೂರಕವಾಗಿ ಆರ್‌ಎಎಫ್ ಘಟಕ ಆರಂಭವಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಜಿಲ್ಲೆಯಲ್ಲಿ ಈ ಘಟಕ ಸ್ಥಾಪನೆಯಾಗಲು ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಎಲ್ಲ ಅಧಿಕಾರಿಗಳಿಗೆ ಜಿಲ್ಲೆಯ ಜನತೆ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.