ಸಾಗರ: ಮಕ್ಕಳು ಶಿಕ್ಷಣದ ಜತೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು.
ವಿಜಯನಗರ ಬಡಾವಣೆಯಲ್ಲಿ ವಿಜಯನಗರ ಅಕ್ವೇಟಿಕ್ಸ್, ಯುವ ಸಬಲೀಕರಣ ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಈಜು ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಲ್ಲಿ ದೈಹಿಕ ಶಕ್ತಿ ಹೆಚ್ಚಲು ಹಾಗೂ ಚುರುಕುತನ ಅಳವಡಿಸಿಕೊಳ್ಳಲು ಈಜು ಕಲಿಕೆ ಪೂರಕವಾಗಿದೆ. ಈಜು ಕಲಿಯುವುದರಿಂದ ಆರೋಗ್ಯಕ್ಕೆ ಅನುಕೂಲವಿದೆ. ಈಜುಕೊಳ ಅಭಿವೃದ್ಧಿಗೆ ನಗರಸಭೆಯಿಂದ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.
ನಗರ ಪ್ರಾಧಿಕಾರದ ಸದಸ್ಯ ಸುರೇಶ್ ಬಾಬು ಮಾತನಾಡಿ, ವಿಜಯನಗರ ಈಜುಕೊಳವನ್ನು 45 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದ್ದು, ಮಕ್ಕಳಿಗೆ ಈಜು ಕಲಿಯಲು ಎಲ್ಲ ರೀತಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಅರವಿಂದ ರಾಯ್ಕರ್, ರವಿ ಲಿಂಗನಮಕ್ಕಿ, ಸಿದ್ದರಾಜು, ಗಿರಿಧರರಾವ್ ಇತರರಿದ್ದರು.