ಶಿವಮೊಗ್ಗ: ನ್ಯಾಯಬದ್ಧ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಎಂಪಿಎಂ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ನೇತೃತ್ವದಲ್ಲಿ ಸೋಮವಾರ ಡಿಸಿ ಕಚೇರಿ ಎದುರು ನಿವೃತ್ತ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಹಣಕಾಸು ಸೌಲಭ್ಯಗಳು ತಲುಪಿಲ್ಲ. ಕಾರ್ಮಿಕರಿಗೆ ಆಗಿರುವ ಅನ್ಯಾಯಗಳನ್ನು ಸರಿಪಡಿಸಬೇಕು. ವೇತನದ ಭಾಗವಾದ ತುಟ್ಟಿಭತ್ಯೆ ಬಾಕಿ ಹಣವನ್ನು ನೀಡಿದಾಗ ಅದಕ್ಕೆ ಶೇ.12ರ ಭವಿಷ್ಯನಿಧಿ ಹಣವನ್ನು ನಮ್ಮ ಭವಿಷ್ಯನಿಧಿ ಖಾತೆಗೆ ಕೇಂದ್ರ ಸರ್ಕಾರ ನಿಗದಿಗೊಳಿಸಿದ ಬಡ್ಡಿಯೊಂದಿಗೆ ಜಮಾ ಮಾಡಬೇಕಿತ್ತು. ಈ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2012ರಿಂದ ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನ ಮಾಡಿ ನೀಡಬೇಕಿತ್ತು. ಕಂಪನಿ ಅಧಿಕಾರಿಗಳು ಸರ್ಕಾರದ ಆದೇಶವನ್ನು ಪಾಲಿಸದೇ ತಮಗೆ ತೋಚಿದಂತೆ ಲೆಕ್ಕಾಚಾರ ಮಾಡಿದ್ದಾರೆ. ಇದನ್ನು ಸರಿಪಡಿಸಿ ಬಾಕಿ ಹಣವನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
2012ರಲ್ಲೇ ವೇತನ ಒಪ್ಪಂದವಾಗಿದೆ. ಆದರೆ ಇಲ್ಲಿಯವರೆಗೆ ವೇತನ ನೀಡಿಲ್ಲ. ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. 2017ರಿಂದ ಸೇವೆಯಲ್ಲಿದ್ದ ಕಾರ್ಮಿಕರಿಗೆ ವಾರ್ಷಿಕ ವೇತನ ಹೆಚ್ಚಳ ಮಾಡಿಲ್ಲ. ನಿವೃತ್ತ ಕಾರ್ಮಿಕರಿಗೆ ಹಣದ ಲೆಕ್ಕಾಚಾರದ ಬಗ್ಗೆ ನಿಖರವಾದ ಲೆಕ್ಕಪತ್ರಗಳನ್ನೂ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೌರವ ಸಲಹೆಗಾರರಾದ ಕೆ.ಜಿ. ವೆಂಕಟೇಶಮೂರ್ತಿ, ಎಸ್.ಆರ್.ಸೋಮಶೇಖರ್, ಸಂಚಾಲಕರಾದ ಎನ್.ರಘುನಾಥ ರಾವ್, ಶಿವಲಿಂಗಯ್ಯ, ವಿ.ಗೋವಿಂದಪ್ಪ, ಪ್ರಧಾನ ಸಂಚಾಲಕ ಟಿ.ಜಿ. ಬಸವರಾಜಯ್ಯ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.