ತ್ಯಾಗರ್ತಿ ಮಾರಿಕಾಂಬಾ ಜಾತ್ರೆಯಲ್ಲಿ ಏರ್ಪಡಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು. ಅನಿತಾಕುಮಾರಿ, ಕಲಸೆ ಚಂದ್ರಪ್ಪ, ಚೇತನ್‌ರಾಜ್ ಕಣ್ಣೂರು ಇತರರಿದ್ದರು.  
ನ್ಯೂಸ್

ಮಾರಿಕಾಂಬಾ ದೇವಿಯ ಅದ್ದೂರಿ ರಾಜಬೀದಿ ಉತ್ಸವ

ತ್ಯಾಗರ್ತಿ: ಐದು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆಗೆ ಮಂಗಳವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು. ಮಾರಿಕಾಂಬಾ ಅಮ್ಮನವರ ಪ್ರಾಣ ಪ್ರತಿಷ್ಠಾಪನೆ ವಿಶೇಷ ಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಸಲಾಯಿತು.

ರಾತ್ರಿ ಮಾರಿಕಾಂಬೆಯನ್ನು ತವರು ಮನೆಯಿಂದ ದೇವಿ ವಿಗ್ರಹವನ್ನು ವಾದ್ಯಮೇಳಗಳೊಂದಿಗೆ ಜಾನಪದ ಕಲಾತಂಡಗಳ ಮೆರವಣಿಗೆ ಮೂಲಕ ರಾಜಬೀದಿಯಲ್ಲಿ ವಿಶೇಷವಾಗಿ ಸಿಂಗರಿಸಿದ ರಥದಲ್ಲಿ ಕೂರಿಸಿ ಜಾತ್ರಾ ಸ್ಥಳಕ್ಕೆ ಕರೆತರಲಾಯಿತು.

ಬುಧವಾರ ಬೆಳಗ್ಗೆ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಹಣ್ಣು-ಕಾಯಿ ಸಮರ್ಪಿಸಿದರು. ಮಹಿಳೆಯರು ಉಡಿ ತುಂಬುವುದು, ಹರಕೆ ಸಮರ್ಪಣೆ, ಬಾಗಿನ ಸಮರ್ಪಣೆ ಮಾಡಿದರು.

ನವಚೇತನ ಯುವಕ ಸಂಘ ಹಾಗೂ ಆರ್ಯ ಈಡಿಗ ಸಂಘದಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶಾಸಕ ಗೋಪಾಲಕೃಷ್ಣ ಬೇಳೂರು, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಕುಮಾರಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾವತಿ ಚಂದ್ರಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಸೋಮಶೇಖರ್ ಲಾವಿಗೆರೆ, ಚೇತನ್‌ರಾಜ್ ಕಣ್ಣೂರು, ಗಣಪತಿ ಮಂಡಗಳಲೆ ಇತರರಿದ್ದರು.