ನ್ಯೂಸ್

ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ಲಾರಿ-ಕಾರು ನಡುವೆ ಭೀಕರ ಅಪಘಾತ: ಮೂವರು ಸಾವು, ಓರ್ವನ ಸ್ಥಿತಿ ಗಂಭೀರ

ಶಿವಮೊಗ್ಗ: ಬೆಳ್ಳಂಬೆಳಗ್ಗೆ ಲಾರಿ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ದುರಂತ ಸಾವಿಗೀಡಾಗಿ, ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಸಮೀಪದ ಕಲ್ಲಾಪುರ ಗ್ರಾಮದ ಬಳಿ ನಡೆದಿದೆ.

ವಿವೇಕ್ (21), ಕಾರ್ತಿಕ್ (23) ಹಾಗೂ ಮೋಹನ್ (22) ಮೃತ ದುರ್ದೈವಿಗಳು. ಕಾರಿನ‌ಲ್ಲಿ ಹಿಂಬದಿ ಕುಳಿತಿದ್ದ ರುದ್ರೇಶ್ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ.

ಶಿವಮೊಗ್ಗದಿಂದ ಸವಳಂಗ ಕಡೆಗೆ ಹೋಗುತ್ತಿದ್ದ KA 17 MA 3581 ನಂಬರ್​ ಬ್ಯಾಲನೋ ಕಾರು ಹಾಗೂ ಸವಳಂಗದಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ KA 27 C 3924 ಸಂಖ್ಯೆಯ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)