ಶಿಕಾರಿಪುರ: ಯುವಜನರು ರಾಷ್ಟ್ರದ ಶಕ್ತಿ. ಸಮರ್ಥ ಭಾರತ ನಿರ್ಮಾಣ ಮಾಡುವಲ್ಲಿ ಯುವಶಕ್ತಿ ಸದ್ಬಳಕೆಯಾಗಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ತಾಲೂಕಿನ ಕ್ರೀಡಾಂಗಣದಲ್ಲಿ ಬಾಪೂಜಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆ ಕ್ರೀಡೆಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ ಎಂದು ತಿಳಿಸಿದರು.
ಒಲಿಪಿಂಕ್ಸ್‌ಗೆ ಪೂರಕವಾಗಿ ತಯಾರಿ ನಡೆಯುತ್ತಿದೆ. ಗ್ರಾಪಂ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೂ ಪ್ರತಿಭಾವಂತ ಕ್ರೀಡಾಪಟುಗಳು ಇದ್ದು, ಅವರನ್ನು ಗುರುತಿಸಿ ತರಬೇತಿ ನೀಡಲಾಗುವುದು. ಉದ್ಯಮಿಗಳು ಹಾಗೂ ಆಸಕ್ತ ಸಂಘಟನೆಗಳು ಅವರನ್ನು ದತ್ತು ತೆಗೆದುಕೊಂಡು ಶ್ರೇಷ್ಠ ಕ್ರೀಡಾಪಟುಗಳಾಗಿ ರೂಪಿಸಲು ಯೋಜನೆ ಸಿದ್ಧವಾಗಿದೆ.
ಬಿ.ವೈ.ರಾಘವೇಂದ್ರ
ಲೋಕಸಭಾ ಸದಸ್ಯ
ಯುವಕರು ದುಶ್ಚಟಗಳ ದಾಸರಾಗಿರುವುದು ಆತಂಕದ ಸಂಗತಿ. ಕೆಟ್ಟ ಹವ್ಯಾಸಗಳಿಂದ ದೂರವಿರಬೇಕು. ಆರೋಗ್ಯದ ಕಡೆ ಗಮನ ವಹಿಸಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದ ಸಂದರ್ಭ ಕ್ರೀಡಾ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದರು. ಶಿರಾಳಕೊಪ್ಪ ಸ್ಟೇಡಿಯಂ ನವೀಕರಣ ಅಭಿವೃದ್ಧಿ ಮತ್ತು ಪ್ರಥಮದರ್ಜೆ ಕಾಲೇಜಿಗೆ ಅನುದಾನ ನೀಡಿದ್ದರು. ತಾಲೂಕು ಕ್ರೀಡಾಂಗಣದಲ್ಲಿ ಮಳೆ ಬಂದರೂ ಕ್ರೀಡಾ ಕಾರ್ಯಕ್ರಮಗಳಿಗೆ ತೊಂದರೆಯಾಗದಂತೆ ನವೀಕೃತಗೊಳಿಸಲು ಯೋಜನೆ ಸಿದ್ಧವಾಗಿದೆ ಎಂದು ತಿಳಿಸಿದರು.
ಯುವ ಕ್ರೀಡಾಪಟುಗಳು ಸಂಸದ್ ಖೇಲ್ ಮಹೋತ್ಸವದಲ್ಲಿ ನೋಂದಣಿ ಮಾಡಿಕೊಂಡು ಭಾಗವಹಿಸಬೇಕು. ಎಂಟು ವಿಧಾನಸಭಾ ಕ್ಷೇತ್ರಗಳ ಪ್ರತಿ ಗ್ರಾಪಂನಲ್ಲಿ ವಾಲಿಬಾಲ್, ಕ್ರಿಕೆಟ್, ಕುಸ್ತಿ, ಥ್ರೋಬಾಲ್, ಕಬಡ್ಡಿ, ಖೋ-ಖೋ, ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಬಾಪೂಜಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಿ.ಪಾಪಯ್ಯ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳು ಇರುವ ಪಿಯು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರು ಇಲ್ಲದೆ ಕ್ರೀಡಾಪ್ರತಿಭೆಗಳಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದರು. ಉಪನ್ಯಾಸಕರ ಸಂಘದ ಅಧ್ಯಕ್ಷ ದೇವಕುಮಾರ್, ಪುಟ್ಟಪ್ಪ, ಬಂಗಾರಪ್ಪ, ಆಂಜಿನಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್, ಪುರಸಭೆ ಮಾಜಿ ಅಧ್ಯಕ್ಷ ವಸಂತಗೌಡ, ಟಿಎಪಿಸಿಎಂಎಸ್ ನಿರ್ದೇಶಕ ವೀರಣ್ಣ ಗೌಡ, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಪವಿತ್ರಾ, ಪ್ರಾಚಾರ್ಯ ಮುಸ್ತಾಫ, ಡಾ. ವೀರೇಂದ್ರ ಗೌಡ, ರಮೇಶ್, ರಾಘವೇಂದ್ರ ಇತರರಿದ್ದರು.