ಸಾಗರದಲ್ಲಿ ಆಯೋಜಿಸಿದ್ದ ನಾದೋಪಾಸನೆ ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಮೈತ್ರಿ ವಿ. ಪಾಟೀಲ್, ಎಚ್.ಎನ್.ನರಸಿಂಹಮೂರ್ತಿ, ಮೋಹನ ಹೆಗಡೆ, ವಸುಧಾ ಶರ್ಮ ಇತರರಿದ್ದರು.  
ನ್ಯೂಸ್

ಆಧುನಿಕ ತಂತ್ರಜ್ಞಾನ ಒಳ್ಳೆಯ ಕೆಲಸಕ್ಕೆ ಬಳಕೆಯಾಗಲಿ

ಸಾಗರ: ಆಧುನಿಕ ತಂತ್ರಜ್ಞಾನದ ಸದ್ಬಳಕೆಗಿಂತ ದುರ್ಬಳಕೆ ಆಗುತ್ತಿರುವುದೇ ಹೆಚ್ಚು. ಯುವಜನರು ಸಂಸ್ಕಾರದಿಂದ ದೂರ ಸರಿಯುತ್ತಿದ್ದು, ಅವರಿಗೆ ದೇಶೀಯ ಕಲೆಗಳ ಮಹತ್ವವನ್ನು ಪರಿಚಯಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಹೇಳಿದರು.

ಸಾಗರ ನಗರಸಭೆ ರಂಗಮಂದಿರದಲ್ಲಿ ವೇದನಾದ ಪ್ರತಿಷ್ಠಾನ ಮತ್ತು ಸದ್ಗುರು ಹಿಂದೂಸ್ತಾನಿ ಸಂಗೀತ ವಿದ್ಯಾಲಯದಿಂದ ಆಯೋಜಿಸಿದ್ದ ನಾದೋಪಾಸನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಮೊಬೈಲ್ ದಾಸರಾಗುತ್ತಿರುವುದು ದುರದೃಷ್ಟಕರ ಸಂಗತಿ. ವಿದುಷಿ ವಸುಧಾ ಶರ್ಮ ನೇತೃತ್ವದ ಸಂಗೀತ ಶಾಲೆಯಲ್ಲಿ ಕಲಿತ ಮಕ್ಕಳು ದೇಶ-ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಇಂತಹ ಸಂಗೀತ ಶಾಲೆಗಳಿಗೆ ಸೂಕ್ತ ಪ್ರೋತ್ಸಾಹ ಅಗತ್ಯ ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಪ್ರೊ. ಕೆ.ಆರ್.ಕೃಷ್ಣಯ್ಯ ಮಾತನಾಡಿ, ಸಾಹಿತ್ಯ ಮತ್ತು ಸಂಗೀತದ ಸಂವೇದನೆ ಇಲ್ಲದವನು ಶ್ರೇಷ್ಠನಾಗಲು ಸಾಧ್ಯವಿಲ್ಲ. ಸಂಗೀತ ನಮ್ಮನ್ನು ಆಹ್ಲಾದಗೊಳಿಸುತ್ತದೆ. ಸಾಗರದಲ್ಲಿ ಸಂಗೀತವನ್ನು ಆರಾಧಿಸಿಕೊಂಡು ಬರುವ ಪರಂಪರೆ ಇದೆ. ಸಂಗೀತದ ಮೂಲಕ ಭಾವನೆ ಅಭಿವ್ಯಕ್ತಗೊಳಿಸಲು ಸಾಧ್ಯ. ನಾದೋಪಾಸನೆ ಮೂಲಕ ಹೊಸ ಕಲಾವಿದರು ಸಂಗೀತ ಕಾರ್ಯಕ್ರಮ ನೀಡಿರುವುದು ಸಂತೋಷದ ಸಂಗತಿ ಎಂದರು.

ನಿವೃತ್ತ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಶ್ರೀಧರ ಹೆಗಡೆ, ಎಚ್.ಎನ್.ನರಸಿಂಹಮೂರ್ತಿ, ವಸುಧಾ ಶರ್ಮ, ಮೋಹನ ಹೆಗಡೆ ಇತರರಿದ್ದರು.