ರಿಪ್ಪನ್‌ಪೇಟೆ ಸಮೀಪದ ಹಡ್ಲುಬೈಲು ಸರ್ಕಾರಿ ಶಾಲೆಯ ಕಲಿಕಾ ಹಬ್ಬದಲ್ಲಿ ಪಾಲ್ಗೊಂಡಿದ್ದ ಚಿಣ್ಣರು.  
ನ್ಯೂಸ್

ಮಕ್ಕಳ ಜ್ಞಾನ ವೃದ್ಧಿಸುವ ಕಲಿಕಾ ಹಬ್ಬ

ರಿಪ್ಪನ್‌ಪೇಟೆ: ಹಡ್ಲುಬೈಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಹುಂಚ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ವಿಶೇಷ ಆಚರಣೆಗಳಿಂದ ಗಮನ ಸೆಳೆಯಿತು.

ಹಳ್ಳಿಯ ಪರಿಸರದಂತೆ ಕಲಿಕಾ ಹಬ್ಬದ ವೇದಿಕೆ ಸಿದ್ಧಪಡಿಸಲಾಗಿತ್ತು. ಮಕ್ಕಳ ಭಾವಚಿತ್ರ, ಆಕರ್ಷಕ ಗೊಂಬೆಗಳು, ಒಗಟುಗಳು, ಬಣ್ಣಬಣ್ಣದ ಛತ್ರಿಗಳೊಂದಿಗೆ ಅಲಂಕೃತಗೊಂಡಿದ್ದ ಶಾಲೆ ಆಕರ್ಷಿತವಾಗಿತ್ತು. ಹಸಿರಿನಿಂದ ಕಂಗೊಳಿಸುತ್ತಿದ್ದ ಶಾಲೆ, ಕಲಿಕಾ ಕುಟೀರ, ಬಾಲವನದಲ್ಲಿ ಮಕ್ಕಳ ಕಲರವದಲ್ಲಿ ತುಂಬಿತ್ತು.

ಗ್ರಾಪಂ ಅಧ್ಯಕ್ಷೆ ಸುಮಂಗಲಾ ದೇವರಾಜ್ ಚಾಲನೆ ನೀಡಿದರು. ಬಿಇಒ ಎಚ್.ಆರ್.ಕೃಷ್ಣಮೂರ್ತಿ ಮಾತನಾಡಿ, ಮಕ್ಕಳ ಜ್ಞಾನ ವೃದ್ಧಿಸಲು ಕಲಿಕಾ ಹಬ್ಬ ಸಹಕಾರಿಯಾಗುತ್ತದೆ. ಮಕ್ಕಳಲ್ಲಿ ಹೊಸ ಉತ್ಸಾಹ ಮೂಡಿಸುತ್ತದೆ ಎಂದರು. ಮುಖ್ಯಶಿಕ್ಷಕ ಚಂದ್ರಶೇಖರ್, ಸಹ ಶಿಕ್ಷಕಿ ಕಲಾವತಿ, ಕರಿಬಸಪ್ಪ, ಗ್ರಾಪಂ ಸದಸ್ಯರಾದ ರಾಘವೇಂದ್ರ ತೋಟದಕಟ್ಟು, ಸರೋಜಾ ನವೀನ್, ಶ್ರೀಧರ್, ಯಶಸ್ವತಿ ಜೈನ್, ಸರ್ಕಾರಿ ನೌಕರ ಸಂಘದ ಸದಸ್ಯ ಬಸವಣ್ಯಪ್ಪ, ಶಿವಪ್ಪ, ಹುಂಚ ಕ್ಲಸ್ಟರ್ ಸಿಆರ್‌ಪಿ ಎಂ.ದೀಪಾ, ಕೆ.ಎಸ್.ಶ್ರೀಧರಮೂರ್ತಿ ಇತರರಿದ್ದರು.