ಶಿಕಾರಿಪುರ: ಮಳೆಗಾಲ ಆರಂಭದ ವೇಳೆಯಲ್ಲಿ ಡೆಂಘೆ ಪ್ರಕರಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಟಿಎಚ್‌ಒ ಡಾ. ನವೀದ್ ಖಾನ್ ಹೇಳಿದರು.
ಡೆಂಘೆ ನಿಯಂತ್ರಣಕ್ಕೆ ಪೂರಕವಾಗಿ ಪಟ್ಟಣದಲ್ಲಿ ಆಯೋಜಿಸಿದ್ದ ಲಾರ್ವಾ ಸಮೀಕ್ಷೆ ಮತ್ತು ನಿರ್ಮೂಲನೆ ಅಭಿಯಾನದಲ್ಲಿ ಮಾತನಾಡಿ, ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಿದರೆ ಡೆಂಘೆ ನಿಯಂತ್ರಿಸಬಹುದು. ಇಲಾಖೆಯಿಂದ ಡೆಂಘೆ ನಿಯಂತ್ರಣಕ್ಕೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
2024ರ ಜೂನ್‌ನಲ್ಲಿ ತಾಲೂಕಿನಲ್ಲಿ 67 ಡೆಂಘೆ ಪ್ರಕರಣಗಳು ವರದಿಯಾಗಿದ್ದು, ಈ ವರ್ಷ ತಾಲೂಕಿನಲ್ಲಿ ಈವರೆಗೆ 7 ಪ್ರಕರಣ ವರದಿಯಾಗಿವೆ. ಡೆಂಘೆ ನಿಯಂತ್ರಣಕ್ಕೆ ಲಾರ್ವಾ ನಿರ್ಮೂಲನೆಯೇ ಪ್ರಮುಖ ಅಸ್ತ್ರ. ಶಿಕಾರಿಪುರದಲ್ಲಿ ಇಲಾಖೆ ಸಿಬ್ಬಂದಿಯ ಮೂರು ತಂಡ ರಚಿಸಿ 3,845 ಮನೆಗಳನ್ನು ಸಮೀಕ್ಷೆ ನಡೆಸಿದ್ದಾರೆ. 214 ಮನೆಗಳ ಸಂಗ್ರಹಿಸಿದ ನೀರಿನಲ್ಲಿ ಲಾರ್ವಾಗಳು ಪತ್ತೆಯಾಗಿವೆ. 32,388 ಪರಿಕರಗಳನ್ನು ಪರೀಕ್ಷಿಸಿ 267 ಕಡೆ ಲಾರ್ವಾ ಕಂಡುಬಂದಿದ್ದು, ಅವುಗಳನ್ನು ನಾಶಪಡಿಸಲಾಗಿದೆ ಎಂದರು.
ರಾಷ್ಟ್ರೀಯ ಡೆಂಘೆ ದಿನಾಚರಣೆ ಅಂಗವಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಅರಿವು ಶಿಬಿರ ನಡೆಸಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿ 15 ದಿನಗಳಿಗೊಮ್ಮೆ ಸಮೀಕ್ಷೆಯು ಶಿಕಾರಿಪುರ ಮತ್ತು ಶಿರಾಳಕೊಪ್ಪದಲ್ಲಿ ನಡೆಯುತ್ತದೆ ಎಂದು ತಿಳಿಸಿದರು. ಡೆಂಘೆ ನಿಯಂತ್ರಣ ಅಭಿಯಾನದಲ್ಲಿ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮತ್ತು ಪಿಎಚ್‌ಸಿ ಸಿಬ್ಬಂದಿ ಭಾಗವಹಿಸಿದ್ದರು.