ನ್ಯೂಸ್

ಜಿಲ್ಲೆಯಲ್ಲಿ ಕೆಲಸ ಮಾಡಿದ್ದು ತೃಪ್ತಿ ತಂದಿದೆ: ನಿರ್ಗಮಿತ ಎಸ್ಪಿ ಶಾಂತರಾಜು

ಶಿವಮೊಗ್ಗ: ಕೋರಿಕೆ ಮೇರೆಗೆ ರಾಜ್ಯ ಸರ್ಕಾರ ತನ್ನನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದೆ. ಯಾವುದೇ ಒತ್ತಡದ ಹಿನ್ನಲೆಯಲ್ಲಿ ವರ್ಗಾವಣೆಯಾಗಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಎಸ್ಪಿಯಾಗಿ 20 ತಿಂಗಳು ಸೇವೆ ಸಲ್ಲಿಸಿದ್ದು ನನ್ನ ಪುಣ್ಯ...
ಹೀಗೇಂದು ಹೇಳಿದವರು ನಿರ್ಗಮಿತ ಎಸ್ಪಿ ಕೆ.ಎಂ.ಶಾಂತರಾಜು. ಜನಪ್ರತಿನಿಧಿಗಳ ಸಲಹೆ ಸೂಚನೆಗಳನ್ನು ಪಾಲಿಸುವುದು ಪ್ರಜಾಪ್ರಭುತ್ವದಲ್ಲಿ ನಮ್ಮ ಕರ್ತವ್ಯ. ಟೀಕೆ ಟಿಪ್ಪಣಿಗಳು ಸಹ ಸ್ವಾಭಾವಿಕ. ಕಾನೂನಿನ ಚೌಕಟ್ಟಿನಲ್ಲಿ ಸಕರಾತ್ಮಕವಾಗಿ ಕರ್ತವ್ಯ ನಿರ್ವಹಿಸಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೈಗೊಂಡ ಕೆಲಸಗಳು ತೃಪ್ತಿ ತಂದಿದೆ. ಇದಕ್ಕೆ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಿದ್ದು, ತಂಡವಾಗಿ ಕೆಲಸ ಮಾಡಿ ಅನೇಕ ಕಗ್ಗಂಟ್ಟಾಗಿದ್ದ ಪ್ರಕರಣಗಳನ್ನು ಭೇದಿಸಿದ್ದೇವೆ ಎಂದರು.
ಬಹುತೇಕ ಕೊಲೆ ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಸಾಗರ ತಾಲೂಕಿನ ಬ್ಯಾಕೋಡು ಗ್ರಾಮದಲ್ಲಿ ವೃದ್ಧ ಜೋಡಿ ಕೊಲೆ ಪ್ರಕರಣ ತನಿಖೆ ಹಂತದಲ್ಲಿದ್ದು, ಅದನ್ನೂ ಶೀಘ್ರ ಪೊಲೀಸರು ಬೇದಿಸುವರು ಎಂಬ ವಿಶ್ವಾಸವಿದೆ. ಹುಣಸೋಡು ಸ್ಫೋಟ ಪ್ರಕರಣ ಇನ್ನೂ ತನಿಖೆಯಲ್ಲಿದ್ದು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ಎಎಸ್ಪಿ ಡಾ. ಎಚ್.ಟಿ.ಶೇಖರ್ ಉಪಸ್ಥಿತರಿದ್ದರು.