ಅಖಿಲ ಭಾರತ ಕವಯಿತ್ರಿಯರ ಸಂಘದಿಂದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ 24ನೇ ಅಂತಾರಾಷ್ಟ್ರೀಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಮಾತನಾಡಿದರು. ಆರ್.ಪ್ರಸನ್ನಕುಮಾರ್, ಡಾ.ಜಿ.ಎಸ್.ಸರೋಜಾ, ಕಲಗೋಡು ರತ್ನಾಕರ್ ಇತರರಿದ್ದರು. 
ನ್ಯೂಸ್

ಅನೇಕ ವಚನಕಾರರಿಗೆ ಶಿವಮೊಗ್ಗ ಜನ್ಮ ನೀಡಿದ ತಾಣ:ಮಧು

ಶಿವಮೊಗ್ಗ: ಶಿವಶರಣೆ ಅಕ್ಕಮಹಾದೇವಿ ಸೇರಿದಂತೆ ಅನೇಕ ವಚನಕಾರರಿಗೆ ಜನ್ಮ ನೀಡಿದ ಜಿಲ್ಲೆ ಶಿವಮೊಗ್ಗ. ಇಲ್ಲಿಂದ ರಾಷ್ಟ್ರಕವಿಗಳು ಉದಯಿಸಿದ್ದಾರೆ. ಇಂತಹ ಅಪರೂಪದ ಸ್ಥಳದಲ್ಲಿ ಕವಯಿತ್ರಿಯರ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಅಖಿಲ ಭಾರತ ಕವಯಿತ್ರಿಯರ ಸಂಘದಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಮೂರು ದಿನಗಳ 24ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಿಲ್ಲೆಯಾಗಿದೆ. ಅನೇಕ ಮಹಿಳಾ ಸಾಹಿತಿಗಳು ಈ ಜಿಲ್ಲೆಯವರು ಎಂಬುದು ಹೆಮ್ಮೆಯ ಸಂಗತಿ ಎಂದರು.

ಈ ಸಮ್ಮೇಳನದಲ್ಲಿ ಅನೇಕ ಯುವತಿಯರು ವೇದಿಕೆ ಮೇಲೆ ನಿಂತು ನಿರರ್ಗಳವಾಗಿ ಮಾತನಾಡುತ್ತಿರುವುದನ್ನು ಕಂಡರೆ ಸಂತೋಷವಾಗುತ್ತದೆ. ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು. ಕವಯಿತ್ರಿಯರ ಸಂಘದ ಅಧ್ಯಕ್ಷ ಡಾ. ಲಾರಿ ಆಜಾದ್, ಪ್ರಧಾನ ಕಾರ್ಯದರ್ಶಿ ಡಾ. ಜಿ.ಎಸ್.ಸರೋಜಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ ಇತರರಿದ್ದರು.