ಸಾಗರ: ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಇತರರಿಗೂ ಪ್ರೇರಣೆ ದೊರೆಯುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರಸಭೆ ರಂಗಮಂದಿರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ನಗರಸಭೆಯಿಂದ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ನಮ್ಮ ನೆಲದ ಸಾಧಕರು ಕೇಂದ್ರ, ರಾಜ್ಯ ಸರ್ಕಾರಗಳ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಬೇಕು ಎಂದು ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಜತೆಗೆ ಸಾಂಸ್ಕೃತಿಕ, ಸಾಹಿತ್ಯ, ಆರೋಗ್ಯ ಹಾಗೂ ಶಿಕ್ಷಣ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗುತ್ತಿದೆ. ಸಾಗರದಲ್ಲಿ ಸುಸಜ್ಜಿತ ಒಳಾಂಗಣ ರಂಗಮಂದಿರ ನಿರ್ಮಾಣಕ್ಕೆ ಚಾಲನೆ ಶೀಘ್ರ ನೀಡಲಾಗುತ್ತದೆ. ಗಣರಾಜ್ಯೋತ್ಸವದಲ್ಲಿ ನಮ್ಮೂರಿನ ಸಾಧಕರನ್ನು ಕೂಡ ಗುರುತಿಸಿ ಗೌರವಿಸುತ್ತಿದ್ದೇವೆ ಎಂದರು.
ಉಪವಿಭಾಗಾಧಿಕಾರಿ ಆರ್.ಯತೀಶ್ ಮಾತನಾಡಿ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಊರಿನ ಸಂಸ್ಕೃತಿಯ ಪ್ರತಿಬಿಂಬ. ಇಂತಹ ವೇದಿಕೆಗಳು ಮಕ್ಕಳ ಕಲಾ ಪ್ರದರ್ಶನಕ್ಕೆ ಅವಕಾಶ ಒದಗಿಸುತ್ತವೆ ಎಂದು ಹೇಳಿದರು.
ಈಶ್ವರನಾಯಕ್ ಕುಗ್ವೆ(ಕೃಷಿ), ಜಿ.ಡಿ.ಕೇಶವ ಹೆಗಡೆ(ಪಾರಂಪರಿಕ ಚಿಕಿತ್ಸೆ), ಡಾ. ಎಚ್.ವಿ.ವಿಕ್ರಮ್(ವೈದ್ಯಕೀಯ), ವಂದನಾ ಎ. ಶೆಟ್ಟಿ(ಶಿಕ್ಷಣ), ಎಲ್.ಕೃಪಾ(ಕ್ರೀಡೆ), ಎ.ಪಿ.ಅಂಕಿತಾ(ಯೋಗ) ಅವರನ್ನು ಸನ್ಮಾನಿಸಲಾಯಿತು. ಬಿಇಒ ಇ.ಪರಶುರಾಮಪ್ಪ, ಪೌರಾಯುಕ್ತ ಎಚ್.ಕೆ.ನಾಗಪ್ಪ, ವಿ.ಟಿ.ಸ್ವಾಮಿ, ಎಚ್.ಜಿ.ಸುಬ್ರಹ್ಮಣ್ಯ ಭಟ್ ಹಾಜರಿದ್ದರು.