ಸೊರಬ: ಕೃಷಿಗೂ ಮತ್ತು ಭೂಮಿಗೂ ಅವಿನಾಭಾವ ಸಂಬಂಧ ಇದ್ದು, ಧರ್ಮ ಪರಂಪರೆಯ ಸಂಸ್ಕೃತಿ ಮೂಲವಾಗಿದೆ ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾನುಕೇರಿ ಮಠದಲ್ಲಿ 132ನೇ ಮಾಸಿಕ ಶಿವಾನುಭವ ಹಾಗೂ ಮಣ್ಣೆತ್ತಿನ ಅಮಾವಾಸ್ಯೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಎಲ್ಲ ಕ್ಷೇತ್ರಗಳಂತೆ ಕೃಷಿ ಕ್ಷೇತ್ರವನ್ನೂ ವ್ಯಾವಹಾರಿಕವಾಗಿ ಪರಿಗಣಿಸಿ ಹಣದ ರೂಪದಲ್ಲಿ ನೋಡಲಾಗುತ್ತಿದೆ. ಕೈ ಕೆಸರಾಗಬಾರದು, ಆದರೆ ಬಾಯಿ ಮೊಸರು ಆಗಬೇಕು ಎನ್ನುವ ಮನಸ್ಥಿತಿ ಕೆಲವರಲ್ಲಿ ಇರುವುದರಿಂದ ಕೃಷಿ ಲಾಭದಾಯಕವಲ್ಲ ಎನ್ನುವ ಭಾವನೆ ಮೂಡಿದೆ. ಕೃಷಿಯನ್ನು ಖುಷಿಯಿಂದ ಮಾಡಿದರೆ ನೆಮ್ಮದಿ ಮತ್ತು ಆತ್ಮತೃಪ್ತಿ ಸಿಗಲು ಸಾಧ್ಯ ಎಂದು ತಿಳಿಸಿದರು.
ಕೃಷಿ ಕುಟುಂಬದ ಯುವಕರಿಗೆ ಮದುವೆ ಸಂಬಂಧ ದೊರೆಯುತ್ತಿಲ್ಲ. ಪಾಲಕರು ಹೆಣ್ಣು ಕೊಡುವ ಮನಸ್ಸು ಮಾಡುತ್ತಿಲ್ಲ. ಈ ಎಲ್ಲ ಸಮಸ್ಯೆಗೆ ಕೃಷಿ ಬಗ್ಗೆ ಹೊಂದಿರುವ ನಕಾರಾತ್ಮಕ ಭಾವನೆಯೇ ಕಾರಣ. ಕೃಷಿ ಬಗ್ಗೆ ನಿರಾಸಕ್ತಿ ಹೊಂದಿದರೆ ಸಂಸ್ಕೃತಿ, ಪರಂಪರೆ ನಾಶ ಆಗುತ್ತದೆ ಎಂದರು.
ಅಕ್ಕನ ಬಳಗದ ತಾಲೂಕು ಅಧ್ಯಕ್ಷ ರೇಖಾ ಜಗದೀಶ್ ಮಾತನಾಡಿ, ಮಣ್ಣೆತ್ತಿನ ಅಮಾವಾಸ್ಯೆ ದಿನ ಪ್ರತಿ ಮನೆಯಲ್ಲೂ ಬಸವಣ್ಣನನ್ನು (ಎತ್ತು) ಮಣ್ಣಿನಿಂದ ಸಿದ್ಧಗೊಳಿಸಿ ಪೂಜೆ ಮಾಡುವ ಸಂಪ್ರದಾಯವಿದೆ. ವ್ಯವಸಾಯದಲ್ಲಿ ಕೃಷಿ ಕುಟುಂಬಕ್ಕೆ ಎತ್ತುಗಳು ಆಧಾರ ಆಗಿರುವುದರಿಂದ ಮನೆ ದೇವರನ್ನಾಗಿ ಪೂಜಿಸುವುದು ವಾಡಿಕೆ. ದೈವತ್ವದ ಭಾವನೆ ಹೊಂದಿರುವುದರಿಂದ ಒಳ್ಳೆಯದಾಗುವ ನಂಬಿಕೆ ಇದೆ ಎಂದು ತಿಳಿಸಿದರು.
ಶ್ರೀ ಬಸವ ವಿಚಾರ ವೇದಿಕೆ ರೋಡಗಿ ಹಾಗೂ ಶ್ರೀ ಬಸವ ಸಮಿತಿ ಇಂಡಿ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಚನ ಸಂಗ್ರಹ ಹಾಗೂ ಅವುಗಳ ಭಾವಾರ್ಥ ಬರೆಯುವ ಸ್ಪರ್ಧೆಯಲ್ಲಿ ಸಮಾಧಾನಕರ ಸ್ಥಾನ ಪಡೆದ ಹೇಮಾವತಿ ಅವರನ್ನು ಗೌರವಿಸಲಾಯಿತು. ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ವಿಶ್ವನಾಥ ಗೌಡ, ಸೋಮಪ್ಪ, ಸಮಾಜ ಸೇವಕ ನಾಗರಾಜ್ ಗುತ್ತಿ, ಚಂದ್ರಶೇಖರ್ ನಿಜಗುಣ, ಉಮಾ, ಹೇಮಾವತಿ, ಪೂರ್ಣಿಮಾ ಇತರರಿದ್ದರು.