ಸೊರಬದ ಮುರುಘಾಮಠದಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಕಾಶಿ ಯಾತ್ರೆ ಮುಗಿಸಿ ಬಂದಿರುವ ಸ್ನೇಹ ಬಳಗದ ಸದಸ್ಯರನ್ನು ಸನ್ಮಾನಿಸಲಾಯಿತು. ಶ್ರೀ ಮಹಾಂತ ಸ್ವಾಮೀಜಿ, ಶ್ರೀ ವೃಷಭೇಂದ್ರ ಸ್ವಾಮೀಜಿ, ಚಂದ್ರಶೇಖರ್ ನಿಜಗುಣ ಇತರರಿದ್ದರು.  
ನ್ಯೂಸ್

ಗುರುವಿಗೆ ಇದೆ ಮಹತ್ವದ ಸ್ಥಾನ

ಸೊರಬ: ಶಿಷ್ಯನ ಬದುಕಿಗೆ ಅರ್ಥ ಕಲ್ಪಿಸುವ, ಆತನ ಸಾಧನೆ ಹಾದಿಗೆ ಪ್ರೇರಣೆ ನೀಡಿದ ಗುರುವಿಗೆ ಭಾರತ ದೇಶದಲ್ಲಿ ಮಹತ್ತರ ಸ್ಥಾನವಿದೆ ಎಂದು ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮುರುಘಾಮಠದಲ್ಲಿ ಹಮ್ಮಿಕೊಂಡಿದ್ದ 235ನೇ ಶಿವಾನುಭವ ಗೋಷ್ಠಿ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನಂಬಿದ ಭಕ್ತರ ರಕ್ಷಣೆಗೆ ಜಪ-ತಪಗಳ ಮೂಲಕ, ಅವಘಡದಿಂದ ಮುಕ್ತಿ ಹೊಂದಲು ಗುರು ಪ್ರೇರಣಾ ಶಕ್ತಿಯಾಗಿ ನಿಲ್ಲುತ್ತಾನೆ. ಇಂತಹ ಗುರುವಿನ ಬಗ್ಗೆ ಪೂಜ್ಯ ಭಾವನೆ ಹೊಂದಬೇಕಿರುವುದು ಶಿಷ್ಯನ ಕರ್ತವ್ಯ ಎಂದು ತಿಳಿಸಿದರು.

ಸೊರಬ ಮುರುಘಾ ಮಠದ ಅವರಣದಲ್ಲಿ ಸುಂದರ ಸಭಾಭವನವನ್ನು ನಿರ್ಮಿಸುತ್ತಿದ್ದು, ಅರ್ಧ ಹಂತದಲ್ಲಿರುವ ಭವನಕ್ಕೆ ಭಕ್ತರಿಂದ 20 ಲಕ್ಷ ರೂ. ಧನಸಹಾಯದ ವಾಗ್ದಾನ ಬಂದಿದೆ. ಭಕ್ತರ ಸೇವೆಯನ್ನು ಮಠ ಸದಾ ಸ್ಮರಿಸುತ್ತದೆ. ಎಲ್ಲ ಭಕ್ತರ ಸಹಕಾರದಿಂದ ಮಠವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಶ್ರೀ ಮಹಾಂತ ಸ್ವಾಮೀಜಿ ಜಡೆ ಮಠ

ತರಿಕೇರಿ ಅಳಂದ ಮಠದ ಶ್ರೀ ವೃಷಭೇಂದ್ರ ಸ್ವಾಮೀಜಿ ಮಾತನಾಡಿ, ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದು ಜನ್ಮ ನೀಡಿದ ತಂದೆ, ತಾಯಿಗಳ ಸೇವೆ ಮಾಡುವುದನ್ನು ರೂಢಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದರು.

ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ್ ನಿಜಗುಣ ಮಾತನಾಡಿ, ಗುರುವಿನ ಶಕ್ತಿ ಹಾಗೂ ಭಕ್ತರ ಶಕ್ತಿ ಸೇರಿದರೆ ಮಾತ್ರ ಜೀವನದಲ್ಲಿ ಮುಕ್ತಿ ದೊರೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವೀರೇಶ್ವರ ಲಿಂಗಾಯತ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಅಶೋಕ್ ಅಂಡಿಗೆ ಮಾತನಾಡಿ, ಧರ್ಮ ಕಾರ್ಯಗಳಿಗೆ ಭಾಗವಹಿಸುವ ಮನೋಭಾವ ಬೆಳೆಸಿಕೊಂಡರೆ ಮಾನಸಿಕ ನೆಮ್ಮದಿ ಲಭ್ಯವಾಗುತ್ತದೆ ಎಂದು ತಿಳಿಸಿದರು.

ಗುರುಪೂರ್ಣಿಮೆ ಅಂಗವಾಗಿ ಸ್ವಾಮೀಜಿಗಳಿಗೆ ಅಕ್ಕನ ಬಳಗದ ಸದಸ್ಯರು ಹಾಗೂ ಸಾರ್ವಜನಿಕರು ಪಾದಪೂಜೆ ನೆರವೇರಿಸಿದರು. ಕಾಶಿ ಯಾತ್ರೆ ಮುಗಿಸಿ ಬಂದಿರುವ ಸ್ನೇಹ ಬಳಗದ ಸದಸ್ಯರನ್ನು ಸನ್ಮಾನಿಸಲಾಯಿತು.

ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್, ಪೂರ್ಣಿಮಾ ಶಿವಯೋಗಿ, ಶಂಕರ್ ಶೇಟ್, ಶಿಮುಲ್ ನಿರ್ದೇಶಕ ದಯಾನಂದ ಗೌಡ, ಡಿ.ಶಿವಯೋಗಿ, ಶಿವಕುಮಾರ ಗೌಡ, ವಿಜಯೇಂದ್ರ ಪಾಟೀಲ್, ನಾಗರಾಜ್ ಗುತ್ತಿ, ಲೋಲಾಕ್ಷಮ್ಮ, ಅಕ್ಕನ ಬಳಗದ ಸದಸ್ಯರು ಇದ್ದರು.