ಶಿವಮೊಗ್ಗ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರು ಮತ್ತು ಪಾಲಕರ ಕರ್ತವ್ಯ ಎಂದು ಮೂಲೆಗದ್ದೆ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಶಿಕಾರಿಪುರ ತಾಲೂಕು ಅಂಬಾರಗೊಪ್ಪ ಗ್ರಾಮದಲ್ಲಿ ಕಾಳೇನಹಳ್ಳಿ ಶ್ರೀ ಮಠದಿಂದ ನಿರ್ವಹಿಸುತ್ತಿರುವ ಶ್ರೀ ಗುರು ರುದ್ರಮುನಿ ಶಿವಯೋಗಿ ಪ್ರೌಢಶಾಲೆ ಹಾಗೂ ಶ್ರೀ ರೇವಣಸಿದ್ದೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ನಮ್ಮ ಶಾಲೆ ನಮ್ಮ ಹೆಮ್ಮೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಮಕ್ಕಳ ಬೌದ್ಧಿಕ ಬೆಳವಣಿಗೆ ಜತೆಗೆ ಅವರಲ್ಲಿರುವ ಕೌಶಲಗಳನ್ನು ಗಮನಿಸಿ ಉತ್ತಮ ಸಾಧನೆ ಮಾಡುವಂತೆ ಮಾರ್ಗದರ್ಶನ ನೀಡಬೇಕು. ಗುರುವಿನ ಆಶೀರ್ವಾದದೊಂದಿಗೆ ದೊಡ್ಡ ಗುರಿಯನ್ನು ಮಕ್ಕಳು ನನಸು ಮಾಡಿಕೊಳ್ಳಬೇಕು. ಸಾಂಸ್ಕೃತಿಕ ಉತ್ಸವಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಆರೋಗ್ಯಕರ ಸ್ಪರ್ಧಾ ಮನೋಭಾವ ಬೆಳೆಸುತ್ತದೆ. ಸಾತ್ವಿಕ ವಿಚಾರ, ಒಳ್ಳೆಯ ಗುಣ, ಮಾನವೀಯ ಮೌಲ್ಯಗಳನ್ನು ಕಲಿಸಬೇಕು ಎಂದರು.
ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ನಿರ್ದೇಶಕ ಎನ್.ವಿ.ಈರೇಶ್ ಮಾತನಾಡಿ, ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೆ ಗಮನಹರಿಸಬೇಕು. ಸಾಮಾಜಿಕ ಕಳಕಳಿ, ಸಂಸ್ಕಾರಗಳ ಅರಿವು ಮೂಡಿಸಬೇಕು ಎಂದು ಹೇಳಿದರು.
ಬಿಇಒ ಕೆ.ಬಿ.ಲೋಕೇಶಪ್ಪ, ಸುನಂದಮ್ಮ ಮಲ್ಲಿನಾಥ್ ಲೋನಿ, ಸಂಸ್ಥೆ ಕಾರ್ಯದರ್ಶಿ ಜಿ.ಎ.ಹಿರೇಮಠ್, ಎಸ್‌ಡಿಎಂಸಿ ಉಪಾಧ್ಯಕ್ಷ ಎನ್.ವಿ.ಶೇಖರಪ್ಪ, ಅಂಬಾರಗೊಪ್ಪ ಗ್ರಾಪಂ ಅಧ್ಯಕ್ಷ ಟಿ.ಎನ್.ಸಣ್ಣಪ್ಪ, ಕಪ್ಪನಹಳ್ಳಿ ಗ್ರಾಪಂ ಅಧ್ಯಕ್ಷ ಪ್ರಕಾಶ್, ಮುಖ್ಯಶಿಕ್ಷಕ ಪಿ.ಉಮೇಶ್, ಚನ್ನಬಸವರಾಜ್ ಇತರರಿದ್ದರು.