ಸೊರಬ: ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಪಾಲಕರು ಪ್ರಮುಖ ಪಾತ್ರ ವಹಿಸಬೇಕಿದೆ. ಸರ್ಕಾರವೂ ಇಂತಹ ಶಾಲೆಗಳನ್ನು ಉಳಿಸಲು ಮುಂದಾಗಬೇಕು ಎಂದು ಸಮಾಜ ಸೇವಕ ಡಾ. ಜ್ಞಾನೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಅಭಿವೃದ್ಧಿಗೆ ರೋಟರಿ ಸಂಸ್ಥೆ ನೀಡಿದ ಕೊಡುಗೆ ಪ್ರಯುಕ್ತ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆಯು ಸ್ವಾತಂತ್ರಾೃಪೂರ್ವದಲ್ಲಿ ಸ್ಥಾಪನೆಯಾಗಿದ್ದು, ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಅನೇಕ ಉನ್ನತ ಸ್ಥಾನಗಳಲ್ಲಿದ್ದಾರೆ. ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಕಲ್ಪಿಸಿದ ಇಂತಹ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪಾಲಕರು, ಹಿರಿಯ ವಿದ್ಯಾರ್ಥಿಗಳು ಮುಂದಾಗಬೇಕು. ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಸಂಸ್ಥೆ ವಲಯ ಸಂಯೋಜಕ ಸಂತೋಷ್‌ಕುಮಾರ್, ರೋಟರಿ ಸಂಸ್ಥೆ ಸಮಾಜಮುಖಿಯಾಗಿ ನಿರಂತರ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದರು. ರೋಟರಿ ಮಾಜಿ ಅಧ್ಯಕ್ಷ ನಾಗರಾಜ್ ಗುತ್ತಿ ಮಾತನಾಡಿ, ಸಮಾಜಮುಖಿ ಚಿಂತನೆ ಹೊಂದಿರುವ ಸಂಸ್ಥೆಗಳು ಉತ್ತಮ ಸೇವೆ ಸಲ್ಲಿಸುತ್ತಿವೆ ಎಂದು ತಿಳಿಸಿದರು.
ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಕೃಷ್ಣಪ್ಪ ಓಟೂರು, ಮುಖ್ಯ ಶಿಕ್ಷಕಿ ಗೀತಾ, ಶಿಕ್ಷಕರಾದ ಪುಷ್ಕರಣಿ, ಶಿಲ್ಪಾ, ನಾಗರಾಜ್, ಪಾಲಕರಾದ ರಮೇಶ್, ಲೇಖರಾಜ್, ನಯನಾ, ಸತೀಶ್, ಮಸರತ್ ಪರ್ವೀನ್, ಜ್ಯೋತಿ, ತಾರಾ, ಲೀಲಾವತಿ ಇತರರಿದ್ದರು.