ಆನಂದಪುರ: ಸಿರಿಧಾನ್ಯಗಳ ಬಳಕೆಯಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂದು ಇರುವಕ್ಕಿ ಕೃಷಿ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಹೇಳಿದರು.
ವಿವಿ ಆವರಣದಲ್ಲಿ ಆಯೋಜಿಸಿದ್ದ ಸಿರಿಧಾನ್ಯ ಮತ್ತು ಸಮಗ್ರ ಕೃಷಿ ಪದ್ಧತಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಸಿರಿಧಾನ್ಯಗಳ ಕೃಷಿ ನಡೆಸಿ ರೈತರು ಉತ್ತಮ ಆದಾಯ ಗಳಿಸಲು ಸಾಧ್ಯವಿದೆ. ಸಿರಿಧಾನ್ಯಗಳಿಗೆ ವಿದೇಶಗಳಲ್ಲಿ ಬೇಡಿಕೆಯಿದೆ. ಇಡೀ ಜಗತ್ತು ಸಿರಿಧಾನ್ಯ ಕಾರಣ ಭಾರತದತ್ತ ನೋಡುತ್ತಿದೆ. ರೈತರಿಗೆ ಸಿರಿಧಾನ್ಯ ಕೃಷಿ ಬಗ್ಗೆ ವಿವಿ ಮಾಹಿತಿ ಕಾರ್ಯಾಗಾರ ಮತ್ತು ತರಬೇತಿ ನೀಡುತ್ತಿದೆ ಎಂದು ತಿಳಿಸಿದರು.
ಇರುವಕ್ಕಿ ವಿವಿ ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ, ಹೈದರಾಬಾದ್‌ನ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ತರಬೇತಿಯಲ್ಲಿ ಪಾಲ್ಗೊಂಡ ರೈತರಿಗೆ ಕೃಷಿ ಪರಿಕರ ವಿತರಿಸಲಾಯಿತು. ಸಿರಿಧಾನ್ಯ ಸಂಶೋಧನಾ ಸಂಸ್ಥೆಯ ಡಾ. ಸಂಗಪ್ಪ, ವಿವಿ ಶಿಕ್ಷಣ ನಿರ್ದೇಶಕ ಡಾ. ಬಿ.ಹೇಮ್ಲಾನಾಯ್ಕ, ವಿದ್ಯಾರ್ಥಿ ಕಲ್ಯಾಣ ನಿಧಿ ಡೀನ್ ಡಾ. ನಾರಾಯಣ ಎಸ್.ಮಾವರ್ಕರ್, ವಿವಿ ವಿಶೇಷಾಧಿಕಾರಿ ಡಾ. ಕೆ.ಸಿ.ಶಶಿಧರ, ಕಾರ್ಯಕ್ರಮ ಸಂಯೋಜಕ ಡಾ. ಅರುಣ್‌ಕುಮಾರ್, ರೈತ ತರಬೇತಿ ಸಂಸ್ಥೆಯ ಡಾ. ಕೃಷ್ಣರೆಡ್ಡಿ ಇತರರಿದ್ದರು.