ಸೊರಬ: ಭಗವದ್ಗೀತೆಯಲ್ಲಿನ ಅಂಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಮತ್ತು ಮಾನವೀಯತೆ ನೆಲೆಸಲು ಸಾಧ್ಯ ಎಂದು ಶ್ರೀ ಭಗವದ್ಗೀತಾ ಅಭಿಯಾನದ ಜಿಲ್ಲಾ ಕಾರ್ಯಾಧ್ಯಕ್ಷ ಅಶೋಕ್ ಭಟ್ ಹೇಳಿದರು.
ಪಟ್ಟಣದ ಮುಖ್ಯರಸ್ತೆಯ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ 2025ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅನೇಕ ವಿಕಾರಗಳಿಗೆ ಜನತೆ ಬಲಿಯಾಗುತ್ತಿದ್ದಾರೆ. ವಿಕೃತವಾದ ಮನಸ್ಸು ಅಡ್ಡದಾರಿಯನ್ನು ಹಿಡಿಸುತ್ತಿದೆ. ಭಯೋತ್ಪಾದನೆ, ಅತ್ಯಾಚಾರ, ಕೊಲೆ, ಸುಲಿಗೆ, ಮಾದಕ ವಸ್ತುಗಳ ಸೇವನೆ, ಕೌಟುಂಬಿಕ ಸಮಸ್ಯೆ ಹೆಚ್ಚುತ್ತಿವೆ. ಇದಕ್ಕೆಲ್ಲಾ ಅಧ್ಯಾತ್ಮ ವಿದ್ಯೆಯೇ ಏಕೈಕ ಪರಿಹಾರ ಎಂದು ತಿಳಿಸಿದರು.
ಭಗವದ್ಗೀತೆ ಮೂಲಕ ಸಮಾಜದಲ್ಲಿ ಸುಖ ಮತ್ತು ಶಾಂತಿ ನೆಲೆಸುವಂತೆ ಪ್ರತಿಯೊಬ್ಬರನ್ನು ಸುಸಂಸ್ಕೃತರನ್ನಾಗಿಸುವ ನಿಟ್ಟಿನಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು 2007ರಿಂದ ಭಗವದ್ಗೀತಾ ಅಭಿಯಾನ ಆರಂಭಿಸಿದ್ದು, ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರವಂತರನ್ನಾಗಿಸುವ ಉದ್ದೇಶದಿಂದ ಗೀತ ಜ್ಞಾನ ನೀಡಲಾಗುತ್ತಿದೆ. ಅಶೋಕ್ ಭಟ್ ಶ್ರೀ ಭಗವದ್ಗೀತಾ ಅಭಿಯಾನದ ಜಿಲ್ಲಾ ಕಾರ್ಯಾಧ್ಯಕ್ಷ
ಭಗವದ್ಗೀತಾ ಅಭಿಯಾನ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಪುರಸಭೆ ಸದಸ್ಯ ಮಧುರಾಯ್ ಜಿ. ಶೇಟ್ ಮಾತನಾಡಿ, ಭಗವದ್ಗೀತೆ ಅಧ್ಯಯನ ಮಾಡುವುದರಿಂದ ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯವಾಗುತ್ತದೆ. ತಾಲೂಕು ಮಟ್ಟದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಶ್ರೀ ಭಗವದ್ಗೀತೆ ಕುರಿತ ಸ್ಪರ್ಧೆ ಏರ್ಪಡಿಸಲಾಗುವುದು ಎಂದರು.
ಗೌರವಾಧ್ಯಕ್ಷರಾಗಿ ಪಾಣಿ ರಾಜಪ್ಪ, ಉಪಾಧ್ಯಕ್ಷರಾಗಿ ಎಂ.ಎನ್.ಗುರುಮೂರ್ತಿ, ನಾಗರಾಜ ಗುತ್ತಿ. ಸತೀಶ್ ಜಾಣ್ಮನೆ ನಿಸರಾಣಿ, ಸರಸ್ವತಿ ನಾವುಡ. ಪ್ರಧಾನ ಸಂಚಾಲಕರಾಗಿ ದಿನಕರ ಭಟ್ ಭಾವೆ, ಕಾರ್ಯದರ್ಶಿ ಎಂ.ಎಸ್.ಕಾಳಿಂಗರಾಜ್, ಸಂಚಾಲಕರಾಗಿ ಪುರಸಭೆ ಸದಸ್ಯ ಡಿ.ಎಸ್.ಪ್ರಸನ್ನ ಕುಮಾರ್ ದೊಡ್ಮನೆ, ಪ್ರಶಾಂತ ಕೆ. ಸಾಗರ, ಕೇಶವಮೂರ್ತಿ ಪೇಟ್ಕರ್, ವಾಸುದೇವ ಉಡುಪ, ಗಾಯತ್ರಿ ಜೊಯ್ಸ, ರೂಪದರ್ಶಿನಿ ಮಧುಕೇಶ್ವರ, ಸಹ ಸಂಚಾಲಕರಾಗಿ ರಾಘವೇಂದ್ರ ಆಚಾರ್, ನಾಗರಾಜ ಆಚಾರಿ, ಲೋಕೇಶ್ ಆಯ್ಕೆಯಾದರು. ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಪಿ.ಪಿ.ಹೆಗಡೆ, ಲಕ್ಷ್ಮೀನಾರಾಯಣ, ಖಜಾಂಚಿ ದತ್ತಾತ್ರೇಯ ಹೆಗಡೆ, ವಿಭಾಗ ಸಂಚಾಲಕ ಮ.ಸ. ನಂಜುಂಡಸ್ವಾಮಿ, ವಿವಿಧ ಸಮುದಾಯ ಮುಖಂಡರು ಹಾಗೂ ಸಂಘ ಸಂಸ್ಥೆಯವರು ಇದ್ದರು.