ನ್ಯೂಸ್

ಗೃಹೋಪಯೋಗಿ ಮಳಿಗೆಗೆ ಆಕಸ್ಮಿಕ ಬೆಂಕಿ, ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಭಸ್ಮ

ಶಿವಮೊಗ್ಗ: ನಗರದ ಗಾರ್ಡನ್ ಏರಿಯಾದ ಗೃಹೋಪಯೋಗಿ ವಸ್ತುಗಳ ಗ್ರೀನ್ ಲ್ಯಾಂಡ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿವೆ.

ಕಾರ್ತಿಕ್ ಎಂಬುವರಿಗೆ ಸೇರಿದ ಗ್ರೀನ್ ಲ್ಯಾಂಡ್ ನ ಕಟ್ಟಡದಲ್ಲಿ ನಾಲ್ಕು ವಿಭಾಗಗಳಿದ್ದು ನೆಲ ಮಳಿಗೆಯಲ್ಲಿ ಭಾನುವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತ್ತು. ಕೆಳಗಿನ ಮಳಿಗೆಯಲ್ಲಿ ಬೆಂಕಿಯ ಅನಾಹುತದಿಂದಾಗಿ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. 

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳೀಯರು  ಹಾಗೂ ಅಂಗಡಿಯವರ ನೆರವಿನಿಂದ ಬೆಂಕಿ ನಂದಿಸಿದರು. ಭಾನುವಾರ ಬಹುತೇಕ ಗಾರ್ಡನ್ ಏರಿಯಾದಲ್ಲಿ ಅಂಗಡಿಗಳು ಬಂದ್ ಆಗಿದ್ದು ಅಕ್ಕಪಕ್ಕದ ಅಂಗಡಿ ಮಾಲೀಕರಲ್ಲಿ ಆತಂಕ ಮೂಡಿಸಿತ್ತು.